ಬೆಂಗಳೂರು, ಮೇ 7 (Daijiworld News/MSP): ಕೊರೊನಾ ನಿಯಂತ್ರಣಕ್ಕಾಗಿ ಹೇರಿಕೆಯಾಗಿರುವ ಲಾಕ್ ಡೌನ್ -3 ಯನ್ನು ಸಂಪೂರ್ಣವಾಗಿ ಯಶಸ್ವಿಗೊಳಿಸುವ ಜವಾಬ್ದಾರಿ ಸಾರ್ವಜನಿಕರದ್ದು, 3ನೇ ಹಂತದ ಲಾಕ್ಡೌನ್ ಯಶಸ್ವಿಯಾಗದಿದ್ದರೆ ಮುಂದೆ ಅನಿವಾರ್ಯವಾಗಿ ಕಠಿಣ ನಿಯಮಗಳನ್ನು ಜಾರಿಗೊಳಿಸುವ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳಲಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.
ಸಾಮಾಜಿಕ ಅಂತರ ಪಾಲಿಸಿವುದು ಕಡ್ಡಾಯ, ಮಾಸ್ಕ್ ಹಾಗೂ ಕೈಗವಸು ಧರಿಸುವುದು ಸೇರಿ ಇತರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಕೊರೊನಾ ವೈರಸ್ ನಿಯಂತ್ರಣಕ್ಕೆ ಸಹಕರಿಸಬೇಕು. ಇಲ್ಲವಾದರೆ, ಪರಿಸ್ಥಿತಿ ಬಿಗಡಾಯಿಸಲಿದೆ. ಹೀಗಾದ್ರೆ ಮತ್ತಷ್ಟು ಕಠಿಣ ನಿಯಮ ಜಾರಿ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಹೇಳಿದ್ದಾರೆ.
ಜನತೆಯ ಅನುಕೂಲಕ್ಕಾಗಿ ಕೃಷಿ ಸೇರಿದಂತೆ ಹಲವು ಆರ್ಥಿಕ, ವಾಣಿಜ್ಯ ಚಟುವಟಿಕೆಗಳಿಗಾಗಿ ಕೆಲವು ರಿಯಾಯಿತಿ ನೀಡಲಾಗಿದೆ. ಹಾಗೆಂದು ಕೊರೊನಾ ನಿಯಂತ್ರಣಕ್ಕೆ ಬಂದಿದೆ ಅಥವಾ ತೊಲಗಿದೆ ಎಂದರ್ಥವಲ್ಲ. ಮುಂದೆ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೊಳಿಸಬಾರದು ಎಂದಾದರೆ ಈಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊರಡಿಸಿರುವ ಮಾರ್ಗಸೂಚಿಗಳನ್ನು ಪಾಲಿಸಿ ಎಂದು ಕರೆ ನೀಡಿದರು.