ಬೆಂಗಳೂರು, ಮೇ 08 (DaijiworldNews/PY) : ಕೊರೊನಾ ಕಾರಣದಿಂದಾಗಿ ಶೈಕ್ಷಣಿಕ ವರ್ಷ ಜೂನ್ 1ರಿಂದಲೇ ಆರಂಭವಾಗುವ ಸಾಧ್ಯತೆ ಕಡಿಮೆ ಇದ್ದು, ಶೈಕ್ಷಣಿಕ ದಿನಗಳು ಕಡಿತವಾಗುವುದಕ್ಕೆ ತಕ್ಕಂತೆ ಪಠ್ಯದಲ್ಲೂ ಕಡಿತ ಮಾಡಬೇಕು ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.
ಗುರುವಾರ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಈ ಹಂತದಲ್ಲಿ ಶೈಕ್ಷಣಿಕ ಸಾಲಿನ ಆರಂಭದ ವಿಚಾರವಾಗಿ ತೀರ್ಮಾನಿಸಲು ಸಾಧ್ಯವಾಗದ ಕಾರಣ 1ರಿಂದ 10ನೇ ತರಗತಿ ಹಾಗೂ ಪದವಿಪೂರ್ವ ಶಿಕ್ಷಣದ ಪಠ್ಯಕ್ರಮದಲ್ಲಿ ಹೆಚ್ಚುವರಿ ಎನ್ನುವ ಪಠ್ಯವನ್ನು ಗುರುತಿಸುವ ಕಾರ್ಯಕ್ಕೆ ತಕ್ಷಣವೇ ಚಾಲನೆ ನೀಡಬೇಕು ಎಂದು ತಿಳಿಸಿದರು.
ಕಡಿತವಾಗಬಹುದಾದ ಅವಧಿಯ ಆಧಾರದಲ್ಲಿ ಪ್ರತೀ ತರಗತಿ ಮತ್ತು ಪ್ರತೀ ವಿಷಯಕ್ಕೆ ಸಂಬಂಧಪಟ್ಟಂತೆ 15 ದಿನಗಳ, 1 ತಿಂಗಳ, ಒಂದೂವರೆ ತಿಂಗಳ, 2 ತಿಂಗಳ ಹಂತವಾರು ಹೆಚ್ಚುವರಿಯಾಗಬಹುದಾದ ಪಠ್ಯಗಳನ್ನು ಗುರುತಿಸಿ ಹಾಗೂ ಅದನ್ನು ಕೈಬಿಡುವ ಬಗ್ಗೆ ವಿಸ್ತ್ರತ ವರದಿ ತಯಾರಿಸಬೇಕು. ಶೈಕ್ಷಣಿಕ ವರ್ಷದಲ್ಲಿ ಕಳೆದುಕೊಳ್ಳುವ ಅವಧಿಯ ಆಧಾರದ ಮೇಲೆ ಮಕ್ಕಳ ಕಲಿಕೆಗೆ ಹೊರೆಯಾಗದ ರೀತಿಯಲ್ಲಿ ಅನವಶ್ಯಕ ಮತ್ತು ಪುನಾರಾವರ್ತಿತ ಪಠ್ಯವನ್ನು ಕೈಬಿಡಬೇಕು ಎಂದರು.
ಮಕ್ಕಳವಾಣಿ ಯೂ ಟ್ಯೂಬ್ ಚಾನೆಲ್ನಲ್ಲಿ 1ರಿಂದ 10ನೇ ತರಗತಿವರೆಗೆ ವಿಷಯವಾರು, ಅಧ್ಯಾಯವಾರು ಇಂಗ್ಲೀಷ್ ಹಾಗೂ ಕನ್ನಡ ಮಾಧ್ಯಮ ಬೋಧನೆಯನ್ನು, ಉತ್ತಮ ಶಿಕ್ಷಕರನ್ನು ಆಯ್ಕೆ ಮಾಡಿ ಚಿತ್ರೀಕರಿಸಿ ಯೂ-ಟ್ಯೂಬ್ ಚಾನೆಲ್ನಲ್ಲಿ ಶಾಶ್ವತವಾಗಿ ಲಭ್ಯವಿರುವಂತೆ ಮಾಡಬೇಕು ಎಂದು ಹೇಳಿದರು.
ಕೊರೊನಾ ಕುರಿತ ಪಠ್ಯವನ್ನು ಈ ಶೈಕ್ಷಣಿಕ ಸಾಲಿನಿಂದಲೇ ಎಲ್ಲಾ ತರಗತಿಗಳ ಪಠ್ಯದಲ್ಲಿ ಸೇರಿಸಬೇಕು. ಆಯಾ ವಯೋಮಾನದ ವಿದ್ಯಾರ್ಥಿಗಳಿಗೆ ಆಕರ್ಷಣೀಯವಾಗುವ ರೀತಿಯಲ್ಲಿ ತಿರುಪಠ್ಯ ರಚನೆ ಮಾಡಿ ಶಾಲೆಗಳಿಗೆ ಪೂರೈಕೆ ಮಾಡುವುದರೊಂದಿಗೆ ಶಿಕ್ಷಕರ ತರಬೇತಿ ಪಠ್ಯಕ್ರಮದಲ್ಲೂ ಈ ವಿಷಯದ ಕುರಿತ ಅಂಶಗನ್ನು ಅಳವಡಿಸಿಕೊಳ್ಳಬೇಕು. ಇದು ಪಠ್ಯಕ್ರಮದ ಒಂದು ಭಾಗವಾಗಿ ಕಡ್ಡಾಯವಾಗಿ ಕಲಿಯಬೇಕಾಗಿರುವ ವಿಷಯವಾಗಿರುವಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಇನ್ನು ಶಾಲೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯ. ಇನ್ನು ಇದು ಕಲಿಕಾ ಕ್ರಮವೂ ಆಗಿರಲಿದ್ದು, ಪೋಷಕರಲ್ಲಿ ವಿಶ್ವಾಸ ತರಬೇಕಾಗಿದೆ ಎಂದರು.