ಹಾಸನ, ಮೇ 08 (Daijiworld News/MSP): ಜಲ ಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳೆ ಅವರು ಇಂದು ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನಲ್ಲಿ ನಡೆಯುತ್ತಿರುವ ಏತ್ತಿನ ಹೊಳೆ ಯೋಜನೆ ಕಾಮಗಾರಿ ಪರಿಶೀಲನೆ ನಡೆಸಿದರು.
ತಾಲ್ಲೂಕಿನ ಕುಂಬರಡಿ, ಕಾಡುಮನೆ ,ಹೆಬ್ಬನಳ್ಳಿ ಗ್ರಾಮಗಳಲ್ಲಿನ ಯೋಜನಾ ಸ್ಥಳಗಳಿಗೆ ಭೇಟಿ ನೀಡಿದ ಸಚಿವರು ಬಯಲು ಸೀಮೆಗೆ ನೀರುಣಿಸುವ ಎತ್ತಿನ ಹಳ್ಳ ಯೋಜನೆ ಕಾಮಗಾರಿಗಳನ್ನು ಚುರುಕು ಗೊಳಿಸುವಂತೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು 2021 ರ ಮಾರ್ಚ್ ವೇಳೆಗೆ ಮೊದಲ ಹಂತದ ಕಾಮಗಾರಿ ಪೂರ್ಣ ಗೊಳಿಸಿ 37 ಕಿ ಮೀ ವರಗೆ ಪ್ರಾಯೋಗಿಕವಾಗಿ ನೀರು ಹರಿಸಲಾಗುವುದು ಎಂದರು.ಕೋವಿದ್ 19 ಹಿನ್ನಲೆಯಲ್ಲಿ ಕಾಮಗಾರಿ ವಿಳಂವಾಗಿದೆ. ಇನ್ನು ಮಂದೆ ಕ್ಷಿಪ್ರವಾಗಿ ಕೆಲಸ ನಡೆಸಲಾಗುವುದು. ಆದಷ್ಟು ಬೇಗ ಬಯಲು ಸೀಮೆಗೆ ನೀರು ಹರಿಸಬೇಕೆಂಬುದು ಸರ್ಕಾರದ ಗುರಿಯಾಗಿದೆ ಎಂದರು.
ಯೋಜನೆಯಿಂದ ಬಾದಿತವಾಗಿರುವ ಸಕಲೇಶಪುರ ಆಲೂರು ತಾಲ್ಲೂಕು ಗಳಲ್ಲಿ ಈಗಾಗಾಲೆ ಮೂಲಭೂತ ಸೌಕರ್ಯ ಅಭಿವೃದ್ಧಿ ಗೆ ಗಮನ ಹರಿಸಲಾಗಿದ್ದು ರಸ್ತೆ ಕಾಮಗಾರಿಗಳನ್ನು ಕೈ ಗೊಳ್ಳಲಾಗಿದೆ ಎಂದರು.ನೀರಿನ ವಿಚಾರದಲ್ಲಿ ಮಾತ್ರ ಯಾರೂ ಯಾವುದೇ ರಾಜಕೀಯ ಮಾಡಬಾರದು ಅನುದಾನ ಒದಗಿಸುವ ವಿಚಾರದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಎದುರಾಗಬಹುದು ಆದರೆ ಮುಂದಿನ ದಿನಗಳಲ್ಲಿ ಎಲ್ಲವನ್ನು ಬಗೆಹರಿಸುವುದಾಗಿ ಸಚಿವರು ಭರವಸೆ ನೀಡಿದರು. ಮುಂದಿನ ಮಾರ್ಚ್ ರೊಳಗೆ ಶೀಘ್ರದಲ್ಲೇ ಎತ್ತಿನಹೊಳೆಯಿಂದ ಮೊದಲನೇ ಹಂತದ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ಅವರು ಹೇಳಿದರು.
ಕಳೆದ ಫೆಬ್ರವರಿಯಲ್ಲಿ ತಾವು ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದು, ಅಂದಿನಿಂದ ಎಲ್ಲಾ ಜಲಾಶಯಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯ ಅವಲೋಕನ ಮಾಡುತ್ತಿದ್ದೇನೆ. ಜೊತೆಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ರಾಜ್ಯದಲ್ಲಿ ನೀರಿನ ಸಮಸ್ಯೆ ಉಲ್ಬಣವಾಗದಂತೆ ಮಾಡಿಕೊಳ್ಳಲು ಸೂಚನೆ ನೀಡಿದ್ದೇನೆ ಎಂದರು.
ಎತ್ತಿನಹೊಳೆ ನೀರನ್ನು ಉತ್ತರ ಭಾಗಕ್ಕೆ ಕೊಂಡೊಯ್ಯುವ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು ರಾಜ್ಯದ ಎಲ್ಲಾ ಭಾಗದ ರೈತರು ನಮ್ಮವರೇ ಹಾಗಾಗಿ ಎಲ್ಲರ ಹಿತ ಕಾಪಾಡಬೇಕಾಗುತ್ತದೆ. ನೀರಿನ ಸಮಸ್ಯೆ ತಲೆದೋರದಂತೆ ಎಚ್ಚರ ವಹಿಸಲಾಗುವುದು ಎಂದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ನೀರಾವರಿ ಬಗ್ಗೆ ಹೆಚ್ಚಿನ ಕಾಳಜಿ ಇರುವುದರಿಂದ ಎತ್ತಿನಹೊಳೆ ಯೋಜನೆ ಪೂರ್ಣಗೊಳ್ಳಲು ಯಾವುದೇ ರೀತಿಯ ಸಮಸ್ಯೆ ಆಗದು. ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು ಆದಷ್ಟು ಬೇಗ ರೈತರಿಗೆ ಪರಿಹಾರ ನೀಡುವ ಮೂಲಕ ನೀರಾವರಿಗೆ ಬೇಕಾಗುವಂತಹ ಎಲ್ಲಾ ರೀತಿಯ ಹಣದ ಸಮಸ್ಯೆಯನ್ನು ನಾವು ಬಗೆಹರಿಸುತ್ತೇವೆ. ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ವಿಶೇಷ ಸಭೆ ನಡೆಸಿದ್ದು ಯೋಜನೆ ಅನುಷ್ಠಾನಕ್ಕೆ ಮತ್ತಷ್ಟು ಹೆಚ್ಚಿನ ಒತ್ತು ನೀಡುತ್ತೇವೆ ಎಂದರು.
ಇಲಾಖಾ ಸರ್ವೆ ಪ್ರಕಾರ ಎತ್ತಿನಹೊಳೆಯಲ್ಲಿ ಮಳೆಗಾಲದಲ್ಲಿ ಅಂದಾಜು 24.1 ಟಿ.ಎಂ.ಸಿ ನೀರು ಲಭ್ಯವಿದೆ ಈಗಾಗಲೇ ಚೆಕ್ ಡ್ಯಾಮ್ ಗಳ ಕೆಲಸ ಮುಗಿಯುವ ಹಂತಕ್ಕೆ ತಲುಪಿದ್ದು 100 ಮೀಟರ್ ಎತ್ತರಕ್ಕೆ ನೀರನ್ನು ಹರಿಸಲಾಗುವುದು ಎಂದರು.
ಕೊರೋನಾ ಪ್ರಕರಣದಿಂದ ಕೆಲವರು ಈಗಾಗಲೇ ಜಿಲ್ಲೆಯಿಂದ ತಮ್ಮ ಸ್ವಂತ ರಾಜ್ಯಕ್ಕೆ ತೆರಳಿದ್ದಾರೆ. ಆ ಕಾರಣಕ್ಕೆ ಯೋಜನೆ ವಿಳಂಬವಾಗಲು ಸಾಧ್ಯವಿಲ್ಲ ಪರ್ಯಯ ಮಾರ್ಗಗಳನ್ನು ಕಂಡುಕೊಂಡು ಯೋಜನೆಯನ್ನು ಮುಂದುವರೆಸಿ ಕಾಮಗಾರಿಯನ್ನು ಬೇಗನೆ ಪೂರ್ಣಗೊಳಿಸುವ ಕೆಲಸ ಮಾಡುತ್ತೇವೆ ಎಂದು ಸಚಿವರಾದ ರಮೇಶ್ ಜಾರಕಿಹೊಳಿ ಹೇಳಿದರು.
ಶಾಸಕರಾದ ಹೆಚ್.ಕೆ. ಕುಮಾರಸ್ವಾಮಿ ಹಾಗೂ ಕೆ.ಎಂ. ಶಿವಲಿಂಗೇಗೌಡ ಅವರು ಯೋಜನೆ ಬಗ್ಗೆ ಸಚಿವರಿಗೆ ಮಾಹಿತಿ ನೀಡಿ ತುರ್ತಾಗಿ ಕಾಮಗಾರಿಗಳು ಪೂರ್ಣವಾಗಬೇಕು. ಭೂಮಿ ಕಳೆದು ಕೊಂಡವರಿಗೆ ತ್ವರಿತವಾಗಿ ಪರಿಹಾರ ವಿತರಣೆಯಾಗಬೇಕು ಹಾಗೂ ಮೊದಲ ಹಂತದ ಯೋಜನೆ ಆದಷ್ಟು ಬೇಗ ಮುಗಿಯಬೇಕು ಎಂದು ಮನವಿ ಮಾಡಿದರು.
ಶಾಸಕರಾದ ಕೆ.ಎಸ್. ಲಿಂಗೇಶ್, ಮಾಜಿ ಶಾಸಕರಾದ ಹೆಚ್.ಎಂ. ವಿಶ್ವನಾಥ್ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾದ ಶ್ವೇತ ದೇವರಾಜು, ಉಪ ವಿಭಾಗಾಧಿಕಾರಿ ಗಿರೀಶ್ ನಂದನ್, ಎತ್ತಿನಹೊಳೆ ಯೋಜನೆ ಕಾರ್ಯಪಾಲಕ ಅಭಿಯಂತರರಾದ ಜಯಣ್ಣ ಹಾಗೂ ತಹಸೀಲ್ದಾರ್ ಮಂಜುನಾಥ್ ಮತ್ತಿತರರು ಹಾಜರಿದ್ದರು.