ಭೋಪಾಲ, ಮೇ 08 (DaijiworldNews/PY) : ಮದ್ಯ ಖರೀದಿ ಮಾಡಲು ಬರುವವರ ಮೇಲೆ ನಿಗಾ ಇಡುವ ನಿಟ್ಟಿನಲ್ಲಿ ಮಧ್ಯಪ್ರದೇಶದ ಹೋಶಂಗಬಾದ್ ಜಿಲ್ಲೆಯ ಅಬಕಾರಿ ಅಧಿಕಾರಿ ವಿಶಿಷ್ಟ ಮಾರ್ಗ ಅನುಸರಿಸಿದ್ದು, ಮದ್ಯ ಖರೀದಿ ಮಾಡಲು ಬರುವವರ ಬೆರಳಿಗೆ ಶಾಯಿ ಹಾಕಿ ಹಾಗೂ ಸಂಪರ್ಕ ಮಾಹಿತಿ ಪಡೆದುಕೊಳ್ಳಲು ತಮ್ಮ ವ್ಯಾಪ್ತಿಯ ಎಲ್ಲಾ ಅಂಗಡಿಗಳಿಗೆ ಸೂಚಿಸಿದ್ದಾರೆ.
ಹೋಶಂಗಬಾದ್ ಜಿಲ್ಲೆಯ ಅಬಕಾರಿ ಅಧಿಕಾರಿ ಹೋಶಂಗಬಾದ್ ಜಿಲ್ಲಾ ವ್ಯಾಪ್ತಿಯ ಅಂಗಡಿಗಳಲ್ಲಿ ಮದ್ಯ ಖರೀದಿ ಮಾಡಲು ಬರುವವರ ತೋರು ಬೆರಳಿಗೆ ಅಳಿಸಲಾಗದ ಶಾಯಿಯನ್ನು ಹಾಕಲು ಸೂಚನೆ ನೀಡಿದ್ದು, ಜನರನ್ನು ಪತ್ತೆ ಹಚ್ಚುವ ಸಲುವಾಗಿ ಈ ಮಾರ್ಗ ಅನುಸರಿಸಲಾಗಿದೆ ಎಂದು ಜಿಲ್ಲಾ ಅಬಕಾರಿ ಅಧಿಕಾರಿ ಅಬಿಷೇಕ್ ತಿವಾರಿ ತಿಳಿಸಿದ್ದಾರೆ.
ಬೆರಳಿಗೆ ಶಾಯಿ ಹಾಕುವುದು ಮಾತ್ರವಲ್ಲದೇ, ಮದ್ಯ ಖರೀದಿ ಮಾಡಲು ಬರುವ ಎಲ್ಲರ ದೂರವಾಣಿ ಸಂಖ್ಯೆ, ಮನೆ ವಿಳಾಸವನ್ನು ತೆಗೆದುಕೊಳ್ಳಲಾಗುತ್ತದೆ. ಒಂದು ಸಮಯ ಕೊರೊನಾ ಸೋಂಕು ಕಾಣಿಸಿಕೊಂಡಲ್ಲಿ ಜನರನ್ನು ಪತ್ತೆ ಹಚ್ಚಲು ಸಹಾಯವಾಗಲಿದೆ ಎಂಬ ನಿಟ್ಟಿನಲ್ಲಿ ಹೀಗೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ನಮ್ಮ ಜಿಲ್ಲೆಯಲ್ಲಿ ಅಂಗಡಿ ತೆರೆದವಾದರೂ, ಶಾಯಿ ಪ್ರಯೋಗದಿಂದ ಜನಸಂದಣಿಯಾಗಿಲ್ಲ ಎಂದರು.
ಒಂದು ಸಲ ಮದ್ಯ ಖರೀದಿ ಮಾಡಿ ಹೋದ ಬಳಿಕ ಆ ವ್ಯಕ್ತಿ ಅದೇ ದಿನ ಪುನಃ ಅಂಗಡಿಗೆ ಬಂದರೆ ಶಾಯಿ ಗುರುತು ತಡೆಯುತ್ತಿದೆ. ಅಲ್ಲದೇ, ಅಂಗಡಿಯ ಎದುರುಗಡೆ ಉಂಟಾಗುವ ಜನಸಂದಣಿಯೂ ನಿಯಂತ್ರಣಗೊಂಡಿದ ಎಂದು ಅಂಗಡಿಯ ಮಾಲೀಕರೊಬ್ಬರು ತಿಳಿಸಿದ್ದಾರೆ.