ಬೆಂಗಳೂರು, ಮೇ 08 (DaijiworldNews/PY) : ಸರ್ಕಾರದ ಇತಿಮಿತಿಯಲ್ಲಿ ರೈತರಿಗೆ ಎಲ್ಲ ರೀತಿಯಲ್ಲೂ ಬೆಂಬಲ ನೀಡಲಾಗುವುದು. ಶೀಘ್ರದಲ್ಲೇ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಕೊರೊನಾ ತಡೆಗಟ್ಟಲು ಲಾಕ್ಡೌನ್ ಘೋಷಿಸಿದ್ದ ಕಾರಣ ರೈತರು ಅನುಭವಿಸುತ್ತಿರುವ ಸಂಕಷ್ಟದ ಪರಿಸ್ಥಿತಿಯ ವಿಚಾರದ ಬಗ್ಗೆ ಅಹವಾಲು ಆಲಿಸಲು ಹಾಗೂ ಸರ್ಕಾರದ ಕ್ರಮಗಳನ್ನು ವಿವರಿಸಲು ಗುರುವಾರ ಸಿಎಂ ಬಿಎಸ್ವೈ ಅವರು ರೈತ ಮುಖಂಡರೊಂದಿಗೆ ಸಭೆ ನಡೆಸಿದರು.
ಲಾಕ್ಡೌನ್ ಘೋಷಣೆಯಾದ ಬಳಿಕವೂ ಕೃಷಿ ಹಾಗೂ ಪೂರಕವಾದ ಚಟುವಟಿಕೆಗಳಿಗೆ ಯಾವುದೇ ಅಡಚಣೆ ಇಲ್ಲದೆ ಮುಂದುವರೆಸಲು ಅನುಮತಿ ನೀಡಲಾಗಿದೆ. ಮುಂಗಾರು ಹಂಗಾಮಿನ ಚಟುವಟಿಕೆಗಳು ಅವ್ಯಾಹತವಾಗಿ ನಡೆದಿವೆ. ಅಲ್ಲದೇ, ಕೃಷಿ ಇಲಾಖೆ ಕಚೇರಿಗಳು, ರೈತ ಸಂಪರ್ಕ ಕೇಂದ್ರಗಳು ಮತ್ತು ಬಾಡಿಗೆ ಆಧಾರಿತ ಯಂತ್ರೋಪಕರಣಗಳ ಸೇವಾ ಕೇಂದ್ರಗಳು, ಕೃಷಿ ಪರಿಕರ ಮಾರಾಟ ಕೇಂದ್ರಗಳನ್ನು ತೆರೆಯಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.
ಹಿಂಗಾರು, ಬೇಸಿಗೆ ಹಂಗಾಮಿನ ಬೆಳೆಗಳ ಕಟಾವು ಕೆಲಸ ಪ್ರಗತಿಯಲ್ಲದೆ. ಕಟಾವು ಶೇ.80ರಷ್ಟು ಪೂರ್ಣಗೊಂಡಿದೆ. ಇದಕ್ಕೆ ಕಟಾವು ಯಂತ್ರಗಳನ್ನು ಬೇರೆ ರಾಜ್ಯಗಳಿಂದ ತರಿಸಲು ವ್ಯವಸ್ಥೆ ಮಾಡಲಾಗಿದ್ದು, ರೈತರ ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗು ಅಗ್ರಿ ವಾರ್ ರೂಂ ಸ್ಥಾಪನೆ ಮಾಡಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಬೆಳೆಯುತ್ತಿರುವ ಹೂ-ಹಣ್ಣು, ತರಕಾರಿಗಳನ್ನು ಇತರ ರಾಜ್ಯಗಳಿಗೆ ಸಾಗಿಸಲು ಅವಕಾಶ ಕಲ್ಪಿಸಲಾಗಿದೆ. ಮುಂಗಾರು ಹಂಗಾಮಿಗಾಗಿ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಲಭ್ಯವಿದೆ. ಹಣ್ಣು, ತರಕಾರಿ ಮಾರಾಟಕ್ಕೆ ಹಾಪ್ಕಾಮ್ಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಕೃಷಿ ಉತ್ಪನ್ನಗಳ ಮಾರಾಟಕ್ಕೆ ರೈತ ಉತ್ಪಾದನಾ ಸಂಸ್ಥೆಗಳ ಮೂಲಕ ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಇತ್ತೀಚೆಗೆ ಅಕಾಲಿಕ ಮಳೆಯಿಂದ ರಾಯಚೂರು, ಕೊಪ್ಪಳ,ಬಳ್ಳಾರಿ ಮೊದಲಾದ ಜಿಲ್ಲೆಗಳಲ್ಲಿ ನಾಶವಾಗಿರುವ ಭತ್ತದ ಬೆಳೆಗೆ ಪರಿಹಾರ ನೀಡಲು ಕ್ರಮಕೈಗೊಳ್ಳಲಾಗಿದೆ. ₹ 50.77 ಲಕ್ಷ ರೈತರಿಗೆ ಒಟ್ಟು ₹3755.16 ಕೋಟಿ ಕೇಂದ್ರ ಸರ್ಕಾರದ ಪಿಎಂ-ಕಿಸಾನ್ ಯೋಜನೆಯಡಿ ವಿವಿಧ ಕಂತುಗಳಲ್ಲಿ ಆರ್ಥಿಕ ನೆರವು ನೀಡಲಾಗಿದೆ. 2020-21ನೇ ಸಾಲಿನಲ್ಲಿ 47.81 ಲಕ್ಷ ರೈತರಿಗೆ ತಲಾ ₹ 2000ದಂತೆ ಒಟ್ಟು ₹ 956.32 ಕೋಟಿ ವರ್ಗಾವಣೆ ಮಾಡಲಾಗಿದೆ ಎಂದರು.
ಈವರೆಗೆ ರಾಜ್ಯ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 44.67 ಲಕ್ಷ ರೈತರಿಗೆ ₹893.95 ಕೋಟಿ ಆರ್ಥಿಕ ನೆರವು ಒದಗಿಸಲಾಗಿದೆ. ಕೆಎಂಎಫ್ಗೆ ಮೆಕ್ಕೆಜೋಳ ಖರೀದಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.