ವಿಶ್ವಸಂಸ್ಥೆ, ಮೇ 08 (DaijiworldNews/PY) : ಕೊರೊನಾ ಲಾಕ್ಡೌನ್ ಪರಿಣಾಮ ಈ ವರ್ಷ ಭಾರತದಲ್ಲಿ 2 ಕೋಟಿಗೂ ಹೆಚ್ಚು ಮಕ್ಕಳು ಜನಿಸುವ ನಿರೀಕ್ಷೆ ಇದೆ. ವಿಶ್ವದಲ್ಲೇ ಇದು ದಾಖಲೆಯ ಜನಸಂಖ್ಯಾ ಸ್ಪೋಟವಾಗಿದ್ದು, ನಂತರದ ಸ್ಥಾನದಲ್ಲಿ ಚೀನಾ ಇದೆ ಎಂದು ವಿಶ್ವಸಂಸ್ಥೆಯ ಅಂಗಸಂಸ್ಥೆ ಯುನಿಸೆಫ್ ಹೇಳಿರುವುದಾಗಿ ವರದಿ ತಿಳಿಸಿದೆ.
ವಿಶ್ವಸಂಸ್ಥೆಯ ಅಂಗಸಂಸ್ಥೆ ಯುನಿಸೆಫ್ ಪ್ರಕಾರ, ಈ ಮಕ್ಕಳು ಮಾರ್ಚ್-ಡಿಸೆಂಬರ್ ನಡುವೆ ಜನಿಸಲಿದ್ದಾರೆ. ಕೊರೊನಾ ಕರಿನೆರಳಿನ ನಡುವೆಯೂ ವಿಶ್ವದಲ್ಲಿ ಒಟ್ಟಾರೆ 11.6 ಕೋಟಿ ಮಕ್ಕಳು ಜನಿಸಲಿದ್ದಾರೆ ಎಂದು ತಿಳಿಸಿದೆ.
ಭಾರತದ ನಂತರದ ಸ್ಥಾನದಲ್ಲಿರುವ ಚೀನಾದಲ್ಲಿ 1.35 ಕೋಟಿ ಮಕ್ಕಳು ಜನ್ಮ ತಾಳಲಿದ್ದಾರೆ. 64 ಲಕ್ಷ ನೈಜೀರಿಯಾ, 50 ಲಕ್ಷ ಪಾಕಿಸ್ಥಾನ, 40 ಲಕ್ಷ ಇಂಡೋನೇಷ್ಯಾ ದೇಶಗಳು ನಂತರದ ಸ್ಥಾನದಲ್ಲಿವೆ.
ಕೊರೊನಾದ ತುರ್ತು ಸೇವೆಗಳೇ ಹೆಚ್ಚಾಗಿರುವ ಈ ಸಮಯದಲ್ಲಿ ಹೆರಿಗೆ ಪ್ರಕರಣಗಳನ್ನು ನಿಭಾಯಿಸಲು ಭಾರತದ ಆಸ್ಪತ್ರೆಗಳಿಗೆ ದೊಡ್ಡ ಸವಾಲು ಎದುರಾಗಲಿದೆ. ಹೆಚ್ಚಿನ ಶಿಶುಗಳು ಅಪಾಯಕ್ಕೆ ಸಿಲುಕುವ ಸಾಧ್ಯತೆಗಳಿವೆ ಎಂದು ಯುನಿಸೆಫ್ ಎಚ್ಚರಿಕೆ ನೀಡಿದೆ.