ನವದೆಹಲಿ, ಮೇ 08 (DaijiworldNews/PY) : ನೀವು ತೆರೆದ ಕೂಡಲೇ ತೆರೆದುಕೊಳ್ಳುವುದಕ್ಕೆ ಲಾಕ್ಡೌನ್ ಎಂದರೆ ಕೀ ಅಲ್ಲ. ಅದಕ್ಕಾಗಿ ಹಲವು ಕಾರ್ಯಗಳು ನಡೆಯಬೇಕು. ಮಾನಸಿಕವಾದ ಸಿದ್ಧತೆಯ ಅಗತ್ಯವಿದೆ. ಇದು ಆನ್–ಆಫ್ ಮಾಡುವ ಸ್ವಿಚ್ ಅಲ್ಲ ಎಂಬುದನ್ನು ಸರ್ಕಾರ ತಿಳಿದುಕೊಳ್ಳಬೇಕಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.
ಶುಕ್ರವಾರ ಡಿಜಿಟಲ್ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 17ರಂದು ಕೊರೊನಾ ಲಾಕ್ಡೌನ್ ಕೊನೆಯಾದ ಬಳಿಕ ದೇಶದಲ್ಲಿ ಚಟುವಟಿಕೆಗಳು ಪುನರಾರಂಭಗೊಳ್ಳಲು ಹಾಗೂ ಆರ್ಥಿಕತೆ ಬಗ್ಗೆ ರೂಪಿಸಲಾದ ಯೋಜನಗೆಳ ಬಗ್ಗೆ ಜನರಿಗೆ ಸರ್ಕಾರ ತಿಳಿಸಬೇಕು ಎಂದರು.
ಯಾವತ್ತಿನಿಂದ ದೇಶದಲ್ಲಿ ಚಟುವಟಿಕೆಗಳು ಪುನರಾರಂಭಗೊಳ್ಳಲಿದೆ, ಏನೆಲ್ಲಾ ಮಾನದಂಡಗಳನ್ನು ಪಾಲಿಸಬೇಕಿದೆ, ಪ್ರಾರಂಭಕ್ಕೂ ಮುನ್ನ ಯಾವೆಲ್ಲಾ ನಿಯಮಗಳನ್ನು ಅನುಸರಿಸಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳಬೇಕಿದೆ ಎಂದು ತಿಳಿಸಿದರು.
ಕೊರೊನಾ ಬಗ್ಗೆ ಮಾತನಾಡಿರುವ ಅವರು, ಕೆಲವು ವರ್ಗದ ಜನರಿಗೆ ಸೋಂಕು ರೋಗ ಅಪಾಯಕಾರಿಯಾಗಿದೆ. ಹಿರಿಯರಿಗೆ, ಡಯಾಬಿಟಿಸ್ ಹಾಗೂ ಹೈಪರ್ಟೆನ್ಷನ್ ಹೊಂದಿರುವವರಿಗೆ ಅಪಾಯಕಾರಿ. ಇದನ್ನು ಹೊರತುಪಡಿಸಿದರೆ ಇದು ಉಳಿದವರಿಗೆ ಅಪಾಯಕಾರಿಯಾದುದಲ್ಲ. ನಾವು ಜನರ ಮನಸ್ಸಿನಲ್ಲಿ ಬದಲಾವಣೆ ತರುವುದು ಮುಖ್ಯ. ಈಗಂತು ಜನರು ಆತಂಕಕ್ಕೊಳಗಾಗಿದ್ದಾರೆ. ಮತ್ತೆ ಚಟುವಟಿಕೆಗಳನ್ನು ಪ್ರಾರಂಭಿಸಲು ಸರ್ಕಾರ ಮುಂದಾದರೆ, ಭಯವನ್ನು ವಿಶ್ವಾಸವಾಗಿ ಪರಿವರ್ತಿಸಬೇಕಿದೆ ಎಂದರು.
ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ ಭಾರತ ಅನುಸರಿಸಬೇಕಾದ ಕ್ರಮಗಳ ಬಗ್ಗೆ ರಾಹುಲ್ ಗಾಂಧಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚಿಸಿದ್ದು, ಈಗಾಗಲೇ ಆರ್ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಮತ್ತು ನೊಬೆಲ್ ಪುರಸ್ಕೃತ ಅಭಿಜಿತ್ ಬ್ಯಾನರ್ಜಿ ಅವರೊಂದಿಗೆ ಚರ್ಚೆ ನಡೆಸಿದ್ದಾರೆ.
ಎರಡು ದಿನಗಳ ಹಿಂದೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು, ಮೇ 17ರ ನಂತರ ಲಾಕ್ಡೌನ್ ಮುಂದುವರೆಯಲಿದೆಯೇ ಅಥವಾ ಲಾಕ್ಡೌನ್ ಕೊನೆಗೊಳ್ಳಲಿದೆಯೇ, ಯಾವ ಯೋಜನೆ ರೂಪಿಸಿದೆ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದರು.
ಹಲವು ರಾಜ್ಯಗಳಲ್ಲಿ ಸಿಲುಕಿರುವ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸುವ ಸಲುವಾಗಿ ಉಚಿತ ಪ್ರಯಾಣ ವ್ಯವಸ್ಥೆ ಕಲ್ಪಿಸುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ, ವಲಸೆ ಕಾರ್ಮಿಕರ ಪ್ರಯಾಣಕ್ಕೆ ರೈಲ್ವೆ ಶೇ. 85ರಷ್ಟು ವೆಚ್ಚ ಭರಿಸಲಿದೆ ಹಾಗೂ ರಾಜ್ಯ ಸರ್ಕಾರಗಳು ಶೇ. 15ರಷ್ಟು ವೆಚ್ಚ ನೀಡಬೇಕು ಎಂದು ಬಿಜೆಪಿ ಹೇಳಿತ್ತು.