ಬೆಂಗಳೂರು, ಮೇ 08 (Daijiworld News/MSP): ರಾಜ್ಯ ದಲ್ಲಿ ಈಗಾಗಲೇ ರೈತರು ಸಂಕಷ್ಟದಲ್ಲಿದ್ದು ಇವರಿಗೆ ಹೊಸದಾಗಿ ಬಡ್ಡಿ ರಹಿತ ಸಾಲ ನೀಡಬೇಕಾಗಿದ್ದು ಇದರೊಂದಿಗೆ ರೈತರು ಈಗಾಗಲೇ ಪಡೆದಿರುವ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಬೇಕು, ಇಲ್ಲವಾದಲ್ಲಿ ಮುಂದೆ ಸರ್ಕಾರ ವಿರುದ್ದ ಹೋರಾಟ ಮಾಡುವುದಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ಎಚ್ಚರಿಸಿದ್ದಾರೆ.
ಮುಖ್ಯಮಂತ್ರಿಗಳಿಗೆ ಹಕ್ಕೊತ್ತಾಯ ಸಲ್ಲಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಕೊರೊನಾ ಪರಿಹಾರಕ್ಕಾಗಿ ಸರ್ಕಾರದ ಪ್ಯಾಕೇಜ್ ತೃಪ್ತಿದಾಯಕವಾಗಿಲ್ಲ. ಕೆಲ ಕಾರ್ಮಿಕ ವಲಯಕ್ಕೆ ಮಾತ್ರ ಪರಿಹಾರ ನೀಡಿ, ಬಹುತೇಕ ಸಂಘಟಿತ ಅಸಂಘಟಿತ ಕಾರ್ಮಿಕ ಸರ್ಕಾರ ಪರಿಹಾರ ನೀಡದೆ ಸರ್ಕಾರ ವಂಚನೆ ಎಸಗಿದೆ. ಹೀಗಾಗಿ ಎಲ್ಲಾ ವರ್ಗದ ಅಸಂಘಟಿತ ಕಾರ್ಮಿಕರಿಗೆ ಸರ್ಕಾರ ಪರಿಹಾರ ನೀಡಬೇಕೆಂದು ಸಿದ್ದರಾಮಯ್ಯ ಒತ್ತಾಯಿಸಿದರು.
ಕೇರಳ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಜನರಿಗೆ ದೊಡ್ಡ ಮೊತ್ತದ ಪರಿಹಾರ ಕೊಟ್ಟಿದ್ದಾರೆ. ಪ್ರಧಾನಿ ಕೇರ್ ನ 35 ಸಾವಿರ ಕೋಟಿ ರೂ.ಯಲ್ಲಿ ಒಂದು ರೂಪಾಯಿಯೂ ರಾಜ್ಯಕ್ಕೆ ಬಂದಿಲ್ಲ.ಕಡೇ ಪಕ್ಷದ ರಾಜ್ಯದಿಂದ ಹೋಗಿರುವ ಹಣವನ್ನಾದರೂ ಕೇಂದ್ರ ನಮಗೆ ನೀಡಬೇಕಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದ ಸಂಸದರು ಕೋವಿಡ್ ಪರಿಹಾರಕ್ಕಾಗಿ ಕೇಂದ್ರದ ಮೇಲೆ ಒತ್ತಡ ತಂದು ಕೇಂದ್ರ ಸರ್ಕಾರದಿಂದ ದೊಡ್ಡಮೊತ್ತದ ಪ್ಯಾಕೇಜ್ ತರಬೇಕು. ಇದಕ್ಕಾಗಿ ರಾಜ್ಯ ಸರ್ಕಾರ ಎಲ್ಲಾ ಪ್ರಯತ್ನ ನಡೆಸಬೇಕೆಂದು ಆಗ್ರಹಿಸಿದರು.