ನವದೆಹಲಿ, ಮೇ 08 (DaijiworldNews/PY) : ಕೊರೊನಾ ನಿಯಂತ್ರಿಸುವ ಸಲುವಾಗಿ ರಾಜ್ಯ ಸರ್ಕಾರ ಮದ್ಯವನ್ನು ನೇರವಾಗಿ ಮಾರಾಟ ಮಾಡದೇ ಮನೆಗೆ ಸರಬರಾಜು ಮಾಡುವ ವಿಚಾರವಾಗಿ ಗಂಭೀರವಾಗಿ ಆಲೋಚನೆ ಮಾಡಬೇಕು. ಇದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಮದ್ಯ ಮಾರಾಟ ಮಾಡಲು ಲಾಕ್ಡೌನ್ ವೇಳೆ ಅವಕಾಶ ಕೊಟ್ಟರೆ ಜನಸಾಮಾನ್ಯರ ಜೀವನದ ಮೇಲೆ ಪರಿಣಾಮ ಬೀರಲಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಶುಕ್ರವಾರ ಸುಪ್ರೀಂಕೋರ್ಟ್ ಇತ್ಯರ್ಥಗೊಳಿಸಿದೆ.
ಸರ್ಕಾರದ ಆದೇಶದಂತೆ ಲಾಕ್ಡೌನ್ ಮುಂದುವರೆಸುವ ಹಿನ್ನೆಲೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಪಿಐಎಲ್ ವಿಚಾರಣೆಯನ್ನು ನಡೆಸಿದ ಜಸ್ಟೀಸ್ ಅಶೋಕ್ ಭೂಷಣ್, ಜಸ್ಟೀಸ್ ಸಂಜಯ್ ಕಿಶನ್ ಕೌಲ್ ಮತ್ತು ಜಸ್ಟೀಸ್ ಬಿಆರ್ ಗವಾಯಿ ತಿಳಿಸಿದರು.
ನಾವು ಪಿಐಎಲ್ಗೆ ಸಂಬಂಧಪಟ್ಟಂತೆ ಯಾವುದೇ ಆದೇಶವನ್ನು ನೀಡುವುದಿಲ್ಲ. ಆದರೆ, ರಾಜ್ಯ ಸರ್ಕಾರಗಳು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಸಲುವಾಗಿ ನೇರವಾಗಿ ಮದ್ಯವನ್ನು ಮಾರಾಟ ಮಾಡದೇ ಮನೆಗೆ ಸರಬರಾಜು ಮಾಡುವ ಬಗ್ಗೆ ಆಲೋಚನೆ ಮಾಡಬೇಕು ಎಂದು ಹೇಳಿದೆ.