ನವದೆಹಲಿ, ಮೇ 09 (Daijiworld News/MB) : ಬಾಬರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆಯನ್ನು ಮೂರು ತಿಂಗಳ ಒಳಗೆ ಪೂರ್ಣಗೊಳಿಸಿ ಆಗಸ್ಟ್ 31ರೊಳಗೆ ತೀರ್ಪು ಪ್ರಕಟಿಸಬೇಕು ಎಂದು ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ಸೂಚಿಸಿದೆ.
ಈ ಪ್ರಕರಣದಲ್ಲಿ ಬಿಜೆಪಿ ಹಿರಿಯ ನಾಯಕರಾದ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ ಜೋಶಿ ಹಾಗೂ ಉಮಾ ಭಾರತಿ ವಿರುದ್ಧ ವಿಚಾರಣೆ ನಡೆಯುತ್ತಿದೆ.
ಈ ಪ್ರಕರಣ ರಾಜಕೀಯವಾಗಿ ಅತೀ ಸೂಕ್ಷ್ಮವಾದ ಕಾರಣದಿಂದಾಗಿ ಈ ಪ್ರಕರಣದ ವಿಚಾರಣೆ ಕಾಲಾವಕಾಶ ವಿಸ್ತರಣೆ ಕೋರಿ ಸಿಬಿಐ ವಿಶೇಷ ನ್ಯಾಯಾಧೀಶ ಯಾದವ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠವು, ವಿಚಾರಣೆ ಹಾಗೂ ತೀರ್ಪು ಪ್ರಕಟಿಸುವ ದಿನಾಂಕವನ್ನು 2020 ಆಗಸ್ಟ್ 31ರವರೆಗೆ ವಿಸ್ತರಣೆ ಮಾಡುತ್ತೇವೆ. ವಿಚಾರಣೆ ಪೂರ್ಣ ಮಾಡುವ ಎಲ್ಲಾ ಪ್ರಯತ್ನವನ್ನು ಯಾದವ್ ಅವರು ಮಾಡುತ್ತಿದ್ದಾರೆ ಎಂದು ತಿಳಿದಿದೆ. ಆಗಸ್ಟ್ 31ರೊಳಗೆ ತೀರ್ಪು ಪ್ರಕಟಿಸಬೇಕು ಹಾಗೂ ಮಗದೊಂದು ಬಾರಿ ಗಡುವು ವಿಸ್ತರಣೆ ಮಾಡಲಾಗದು ಎಂದು ತಿಳಿಸಿದೆ.
ಈ ಕುರಿತಾಗಿ 2020ರ ಮೇ 6ರಂದು ಯಾದವ್ ಅವರು ಸಲ್ಲಿಸಿರುವ ಪತ್ರದಲ್ಲಿ ವಿಚಾರಣೆಗೆ 9 ತಿಂಗಳ ಕಾಲಾವಕಾಶ ನೀಡಿದರೂ, ಸಾಕ್ಷ್ಯಾಧಾರ ಸಂಗ್ರಹವಾಗಿಲ್ಲ ಎಂಬುದು ತಿಳಿದುಬಂದಿದೆ. ಕೊರೊನಾ ಲಾಕ್ಡೌನ್ ಕಾರಣದಿಂದಾಗಿ ವಿಡಿಯೊ ಕಾನ್ಫರೆನ್ಸಿಂಗ್ ಸೌಲಭ್ಯ ಲಭ್ಯವಿದ್ದು, ಸಾಕ್ಷಿಗಳ ವಿಚಾರಣೆ ಮತ್ತು ದಾಖಲೆಗೆ ಇದನ್ನು ಯಾದವ್ ಅವರು ಉಪಯೋಗಿಸಿಕೊಳ್ಳಬೇಕು ಎಂದು ಹೇಳಿದೆ.
2019 ಜುಲೈ 19ರಂದು 9 ತಿಂಗಳೊಳಗೆ ಈ ವಿಚಾರಣೆಯ ತೀರ್ಪು ಪ್ರಕಟಿಸಲು ಸಿಬಿಐ ವಿಶೇಷ ನ್ಯಾಯಾಧೀಶರಿಗೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಈ ಆದೇಶದಂತೆ 2020 ರ ಏಪ್ರಿಲ್ ಒಳಗೆ ತೀರ್ಪು ಹೊರಬೀಳಬೇಕಿತ್ತು. ಆದರೆ, ಲಾಕ್ಡೌನ್ನಿಂದಾಗಿ ವಿಚಾರಣೆ ವಿಳಂಬವಾಗಿದೆ.