ಚೆನ್ನೈ, ಮೇ 09 (Daijiworld News/MB) : ಮೂರನೇ ಹಂತದ ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಮದ್ಯದಂಗಡಿ ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದ್ದು ಆ ಪ್ರಕಾರವಾಗಿ ತಮಿಳುನಾಡಿನಲ್ಲೂ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಮದ್ಯದಂಗಡಿಯಲ್ಲಿ ಸಾಮಾಜಿಕ ಅಂತರ ಉಲ್ಲಂಘನೆಯಾಗುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಮದ್ಯದ ಅಂಗಡಿಗಳನ್ನು ಬಂದ್ ಮಾಡಿಸುವಂತೆ ರಾಜ್ಯ ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಆದೇಶ ಮಾಡಿದ್ದು ಆನ್ ಲೈನ್ ಮದ್ಯ ಮಾರಾಟಕ್ಕೆ ಮತ್ತು ಹೋಂ ಡೆಲಿವರಿಗೆ ಮಾತ್ರ ಅವಕಾಶ ನೀಡಿದೆ.
ಮದ್ರಾಸ್ ಹೈಕೋರ್ಟ್ನ ಈ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಸಜ್ಜಾಗಿದೆ.
ಈ ಹಿಂದೆ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಮದ್ರಾಸ್ ಹೈಕೋರ್ಟ್ ಮಾರ್ಗಸೂಚಿಗಳನ್ನು ನೀಡಿತ್ತು. ಮದ್ಯ ಖರೀದಿ ಮಾಡಲು ಕ್ಯೂನಲ್ಲಿ ನಿಂತವರ ನಡುವೆ ಆರು ಅಡಿ ಅಂತರ ಇರಬೇಕು. ಖರೀದಿ ಮಾಡುವವರ ಆಧಾರ್ ಕಾರ್ಡ್ಗಳನ್ನು ಪರಿಶೀಲನೆ ಮಾಡಬೇಕು. ಮಾರ್ಗಸೂಚಿಗಳನ್ನು ಪಾಲನೆಯಾಗದಿದ್ದಲ್ಲಿ ಮದ್ಯದಂಗಡಿ ಮುಚ್ಚಲು ಆದೇಶ ನೀಡಲಾಗುವುದು ಎಂದು ಎಚ್ಚರಿಕೆ ನೀಡಿತ್ತು.
ಈ ಮೊದಲು ಇದೇ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿದ್ದ ಸುಪ್ರೀಂ ಕೋರ್ಟ್, ರಾಜ್ಯ ಸರ್ಕಾರಗಳು ಮದ್ಯದಂಗಡಿಯಲ್ಲಿ ಮದ್ಯ ಮಾರಾಟ ಮಾಡುವ ಬದಲಾಗಿ ಹೋಂ ಡೆಲಿವರಿ ಮಾಡುವ ಬಗ್ಗೆ ಚಿಂತನೆ ನಡೆಸಲಿ ಎಂದು ತಿಳಿಸಿತ್ತು.