ಛತ್ತೀಸ್ಗಡ, ಮೇ 09 (DaijiworldNews/PY) : ಮಾವೋವಾದಿಗಳು ಹಾಗೂ ಪೊಲೀಸರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಸಬ್ಇನ್ಸ್ಪೆಕ್ಟರ್, ನಾಲ್ವರು ಮಾವೋವಾದಿ ನಕ್ಸಲರು ಸಾವನ್ನಪ್ಪಿದ ಘಟನೆ ಶುಕ್ರವಾರ ರಾತ್ರಿ ಮಾನ್ಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ಪರ್ದೋನಿ ಗ್ರಾಮದ ಸಮೀಪ ಕಾಡಿನಲ್ಲಿ ನಡೆದಿದೆ.
ರಾತ್ರಿ ಸುಮಾರು 10.30ರ ವೇಳೆಗೆ ಮಾನ್ಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ಪರ್ದೋನಿ ಗ್ರಾಮದ ಸಮೀಪ ಕಾಡಿನಲ್ಲಿ ಈ ಘಟನೆ ನಡೆದಿದ್ದು, ಮಾವೋವಾದಿಗಳು ಕಾಡಿನಲ್ಲಿ ಇರುವ ಮಾಹಿತಿ ಪಡೆದುಕೊಂಡ ಮಾವೋವಾದಿ ನಿಗ್ರಹ ಪೊಲೀಸ್ ದಾಳಿ ನಡೆಸಿದ ಸಂದರ್ಭ ಪರಸ್ಪರ ಗುಂಡಿನ ಚಕಮಕಿ ನಡೆದಿದೆ.
ಕಾಡಿನಲ್ಲಿ ಮಾವೋವಾದಿಗಳು ಇರುವ ಸಣ್ಣ ಮಾಹಿತಿ ಸಿಕ್ಕಿದ ತಕ್ಷಣವೇ ಸಬ್ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಪೊಲೀಸ್ ಪಡೆಯೊಂದನ್ನು ರಚನೆ ಮಾಡಿ ತಕ್ಷಣವೇ ಅವರನ್ನು ಬಂಧಿಸುವ ಕಾರ್ಯಾಚರಣೆ ಪ್ರಾರಂಭಿಸಲಾಯಿತು. ಆದರೆ, ಪೊಲೀಸ್ ಪಡೆಯು ಪರ್ದೋನಿ ಕಾಡನ್ನು ಸುತ್ತುವರಿದಿತ್ತು. ಆ ಸಂದರ್ಭ ಪೊಲೀಸರತ್ತ ಮಾವೋವಾದಿಗಳು ಗುಂಡು ಹಾರಿಸಲು ಪ್ರಾರಂಭಿಸಿದರು. ಇದಕ್ಕೆ ಪ್ರತಿಯಾಗಿ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯ ಸಂದರ್ಭ ಸಬ್ ಇನ್ಸ್ಪೆಕ್ಟ್ರ್ ಎಸ್.ಕೆ.ಶರ್ಮ ಸಾವನ್ನಪ್ಪಿದ್ದಾರೆ ಎಂದು ರಾಜನಂದಗಾಂವ್ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಶುಕ್ಲಾ ತಿಳಿಸಿದ್ದಾರೆ.
ಎಸ್.ಕೆ.ಶರ್ಮ ಸುರ್ಗುಜಾ ಜಿಲ್ಲೆಯ ನಿವಾಸಿಯಾಗಿದ್ದಾರೆ. ಎನ್ಕೌಂಟರ್ನಲ್ಲಿ ಮೃತಪಟ್ಟವರು ಮಾವೋವಾದಿ ಪಾರ್ಟಿಯ ವಿಭಾಗೀಯ ಸಮಿತಿ ಸದಸ್ಯ ಅಶೋಕ, ಮಾವೋವಾದಿ ಪಾರ್ಟಿಯ ಮತ್ತೊಬ್ಬ ಪದಾಧಿಕಾರಿ ಕೃಷ್ಣ, ಇಬ್ಬರು ಮಹಿಳೆಯರಾದ ಸರಿತಾ ಹಾಗೂ ಪ್ರಮೀಳಾ ಅವರು ಪಾರ್ಟಿಯ ಕಿರಿಯ ಸದಸ್ಯರು ಎಂಬುದಾಗಿ ಎಸ್ಪಿ ಹೇಳಿದ್ದಾರೆ.
ಮಾವೋವಾದಿಗಳಿಂದ ಎಕೆ 47 ರೈಫಲ್, ಒಂದು ಎಸ್ ಎಲ್ ಆರ್, 315 ರೈಫಲ್, ಸಜೀವ ಗುಂಡುಗಳು ಹಾಗೂ ಇತರೆ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಾವೋವಾದಿಗಳು ಮೂರು ರಾಜ್ಯಗಳಾದ ಮಹಾರಾಷ್ಟ್ರ, ಮಧ್ಯಪ್ರದೇಶ ಹಾಗೂ ಛತ್ತೀಸ್ಗಡ ಸೇರಿ ಒಂದು ರೆಡ್ ಕಾರಿಡಾರ್ ಅನ್ನು ನಿರ್ಮಿಸಿಕೊಂಡಿದ್ದು, ಅಲ್ಲಿ ತಮ್ಮ ಕಾರ್ಯಾಚರಣೆಯನ್ನು ನಡೆಸಿದ್ದರು.
ಈ ಪ್ರದೇಶಗಳಲ್ಲಿ ಪಾರ್ಟಿಗೆ ಹೊಸ ಸದಸ್ಯರನ್ನು ಸೇರ್ಪಡೆಗೊಳಿಸುವುದು ಸೇರಿದಂತೆ ಇತರ ಚಟುವಟಿಕೆಗಳು ನಡೆಯುತ್ತಿದ್ದವು. ಈ ಬಗ್ಗೆ ಹಲವು ಮಾಹಿತಿಗಳು ದೊರೆತಿವೆ ಎಂದು ಪೊಲೀಸರು ತಿಳಿಸಿದ್ದಾರೆ. 180 ಮಂದಿ ಈ ಪ್ರದೇಶದಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಅಲ್ಲದೇ, ತಮ್ಮ ಹಿಡಿತ ಸಾಧಿಸಲು ಮಗ್ನರಾಗಿದ್ದರು ಎಂಬ ಮಾಹಿತಿ ಇದೆ ಎಂದು ಪೊಲೀಸರು ಹೇಳಿದ್ದಾರೆ.