ನವದೆಹಲಿ, ಮೇ 09 (Daijiworld News/MB) : ವಿಶಾಖಪಟ್ಟಣದಲ್ಲಿ ಅನಿಲ ದುರಂತದಲ್ಲಿ ಸಾವು ನೋವಿಗೆ ಕಾರಣವಾದ ಎಲ್ಜಿ ಪಾಲಿಮರ್ಸ್ ಕಂಪೆನಿಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ) 50 ಕೋಟಿ ರೂ. ದಂಡ ವಿಧಿಸಿದೆ.
ಶುಕ್ರವಾರ ಈ ಪ್ರಕರಣದ ವಿಚಾರಣೆ ನಡೆಸಿದ ಎನ್ಜಿಟಿ ಮುಖ್ಯಸ್ಥ ನ್ಯಾ| ಆದರ್ಶ್ ಕುಮಾರ್ ಗೋಯೆಲ್, ಇದು ಮಧ್ಯಾಂತರ ಆದೇಶವಾಗಿದೆ. ಕಂಪೆನಿಯ ಮಾರುಕಟ್ಟೆ ಮೌಲ್ಯವನ್ನು ಪರಿಗಣಿಸಿ ವಿಧಿಸಲಾಗಿದೆ. ಕಂಪೆನಿಗಳು ಸರಿಯಾಗಿ ಸುರಕ್ಷಣಾ ಕ್ರಮ ಪಾಲನೆ ಮಾಡಿಲ್ಲ ಎಂದು ಅಸಮಾಧನ ವ್ಯಕ್ತಪಡಿಸಿದ್ದು ಕೇಂದ್ರ ಸರಕಾರ ಹಾಗೂ ಆಂಧ್ರಪ್ರದೇಶ ಸರಕಾರಗಳಿಗೆ ನೋಟಿಸ್ ಜಾರಿಗೊಳಿಸಿ ಈ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿ ಎಂದು ಆಗ್ರಹಿಸಿದೆ.
ಹಾಗೆಯೇ ಎನ್ಜಿಟಿಯು ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ, ಎಲ್ಜಿ ಪಾಲಿಮರ್ಸ್ ಇಂಡಿಯಾ, ಆಂಧ್ರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ, ವಿಶಾಖ ಪಟ್ಟಣ ಜಿಲ್ಲಾಧಿಕಾರಿಯವರಿಗೂ ನೋಟಿಸ್ ಜಾರಿ ಮಾಡಿದ್ದು ಮೇ 18ರಂದು ನಡೆಯಲಿರುವ ಈ ಪ್ರಕರಣದ ಮುಂದಿನ ವಿಚಾರಣೆಯಲ್ಲಿ ಈ ನೋಟಿಸ್ಗೆ ಉತ್ತರ ನೀಡಬೇಕು ಎಂದು ಆದೇಶಿಸಿದೆ.
ಈ ದಂಡವನ್ನು ಕಂಪೆನಿಯು ವಿಶಾಖಪಟ್ಟಣ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪಾವತಿಸಬೇಕು. ಹಾಗೆಯೇ ಮುಂದೆ ಈ ಪ್ರಕರಣಕ್ಕೆ ಸಂಬಂಧಿಸಿ ಎನ್ಜಿಟಿ ನೀಡುವ ಆದೇಶಗಳಿಗೆ ಕಂಪೆನಿಯು ಬದ್ಧವಾಗಿರಬೇಕು ಎಂದು ಸೂಚನೆ ನೀಡಿದೆ.
ನ್ಯಾ| ಆದರ್ಶ್ ಕುಮಾರ್ ಅವರು ಈ ಅನಿಲ ಸೋರಿಕೆಯ ಹಿಂದಿರುವ ಲೋಪದೋಷಗಳ ಪತ್ತೆಗಾಗಿ ಐವರು ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚನೆ ಮಾಡಲಾಗಿದೆ.