ನವದೆಹಲಿ, ಮೇ 09 (DaijiworldNews/PY) : ನಾವೆಲ್ಲರೂ ವೈರಸ್ ಜೊತೆಗೆ ಬದುಕಬೇಕಾದ ಬಹುದೊಡ್ಡ ಸವಾಲು ಮುಂದಿದೆ. ಈ ರೀತಿ ಮಾಡಲು ಸರ್ಕಾರದ ಮಾರ್ಗಸೂಚಿಗಳನ್ನು ನಡವಳಿಕೆಯಲ್ಲೇ ಬದಲಾವಣೆ ಮಾಡಿಕೊಳ್ಳುವಂತೆ ಅಳವಡಿಸಿಕೊಳ್ಳುವುದು ತುಂಬಾ ಮಹತ್ವವಾದದ್ದು ಎಂದು ಕೇಂದ್ರ ಸರ್ಕಾರ ದೇಶವಾಸಿಗಳಿಗೆ ಸಲಹೆ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್, ಕೊರೊನಾ ವೈರಸ್ ನಿಗ್ರಹಕ್ಕಾಗಿ ಘೋಷಣೆ ಮಾಡಲಾಗಿರುವ ಲಾಕ್ಡೌನ್ ಸಡಿಲಗೊಂಡ ನಂತರ ವೈರಸ್ ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತಿರುವಾಗಲೇ ವೈರಸ್ನೊಂದಿಗೆ ಬದುಕಲು ಕಲಿಯಬೇಕು ಎಂದು ತಿಳಿಸಿದರು.
ಈ ವಿಚಾರ ಅಚ್ಚರಿಗೂ ಕಾರಣವಾಗಿದ್ದು, ಲಾಕ್ಡೌನ್ ಮೇ 17ರ ಬಳಿಕ ವಿಸ್ತರಣೆಯಾಗುವುದಿಲ್ಲ ಎನ್ನು ಸುಳಿವು ಆಗಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಇದೇ ರೀತಿಯಾದ ಮಾತನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಇತ್ತೀಚೆಗೆ ಹೇಳಿದ್ದರು. ದೆಹಲಿಯನ್ನು ಪುನಃ ತೆರೆಯುವ ಸಮಯ ಬಂದಿದ್ದು, ಹಾಗಾಗಿ ಜನರು ವೈರಸ್ನೊಂದಿಗೆ ಬದುಕಬೇಕಾಗುತ್ತದೆ ಎಂದು ಹೇಳಿದ್ದರು.
ಈವರೆಗೆ ದೇಶದಲ್ಲಿ 216 ಜಿಲ್ಲೆಗಳಲ್ಲಿ ಒಂದೇ ಒಂದು ಕೊರೊನಾ ಕೇಸ್ ಪತ್ತೆಯಾಗಿಲ್ಲ. 48 ಜಿಲ್ಲೆಗಳಲ್ಲಿ ಕಳೆದ 28 ದಿನಗಳಿಂದ ಹೊಸದಾಗಿ ಯಾವುದೇ ಸೋಕು ಪತ್ತೆಯಾಗಿಲ್ಲ. ಸರ್ಕಾರ ನೀಡಿರುವ ಸೂಚನೆಗಳನ್ನು ಪಾಲಿಸಿದರೆ, ಈ ವೈರಸ್ ಉತ್ತುಂಗಕ್ಕೆ ಹೋಗುವುದನ್ನು ತಪ್ಪಿಸಬಹುದಾಗಿದೆ ಎಂದು ತಿಳಿಸಿದ್ದಾರೆ.