ನವದೆಹಲಿ, ಮೇ 09 (Daijiworld News/MSP): ಅನಿವಾಸಿ ಭಾರತೀಯರ ನೆರವಿಗಾಗಿ ಮೇ 7 ರಂದು ಪ್ರಾರಂಭವಾದ ವಂದೇ ಭಾರತ್ ಮಿಷನ್ನ ಮೊದಲ ಹಂತವನ್ನು ಪೂರ್ಣಗೊಳಿಸಿದ ನಂತರ ಭಾರತ ಸರ್ಕಾರ ವಂದೇ ಭಾರತ್ ಮಿಷನ್ನ ಎರಡನೇ ಹಂತದ ಯೋಜನೆಯ ಬಗ್ಗೆ ತಯಾರಿ ನಡೆಸುತ್ತಿದೆ.
ವಂದೇ ಭಾರತ್ ಮಿಷನ್ - 2 ನಲ್ಲಿ ರಷ್ಯಾ, ಜರ್ಮನಿ, ಥೈಲ್ಯಾಂಡ್, ಫ್ರಾನ್ಸ್, ಸ್ಪೇನ್, ಉಜ್ಬೇಕಿಸ್ತಾನ್, ಕಝಕಿಸ್ತಾನ್ ಮತ್ತು ಇತರ ದೇಶಗಳಿಂದ ಕರೋನವೈರಸ್ ಪ್ರೇರಿತ ಲಾಕ್ಡೌನ್ ಮಧ್ಯೆ ಸಿಕ್ಕಿಬಿದ್ದ ಭಾರತೀಯ ಪ್ರಜೆಗಳನ್ನು ಭಾರತಕ್ಕೆ ಕರೆತರುವ ನಿರೀಕ್ಷೆಯಿದೆ. ಈ ದೇಶದಲ್ಲಿ ಸಿಲುಕಿರುವ ಭಾರತೀಯರು ಸ್ವದೇಶಕ್ಕೆ ಮರಳುವ ಬಗ್ಗೆ ಇಚ್ಚೆ ವ್ಯಕ್ತಪಡಿಸಿದ್ದರಿಂದ ಕೇಂದ್ರ ಸರ್ಕಾರ ಎರಡನೇ ಹಂತದಲ್ಲಿ ಒಂದೇ ಭಾರತ್ ಮಿಷನ್ ವಿಸ್ತರಿಸಲು ಮುಂದಾಗಿದ್ದು, ಮೇ.15 ಬಳಿಕ ಮತ್ತೊಂದು ದೊಡ್ಡ ಕಾರ್ಯಚರಣೆಯನ್ನು ಕೇಂದ್ರ ಆರಂಭಿಸುವ ಸಾಧ್ಯತೆ ಇದೆ.
ಪ್ರಸ್ತುತ, ಮೇ 7 ರಿಂದ ಮೇ 13 ರವರೆಗೆ 64 ಏರ್ ಇಂಡಿಯಾ ವಿಮಾನಗಳು ಅಮೇರಿಕಾ, ಯುನೈಟೆಡ್ ಅರಬ್ ಎಮಿರೇಟ್ಸ್, ಯುನೈಟೆಡ್ ಕಿಂಗ್ಡಮ್, ಬಾಂಗ್ಲಾದೇಶ, ಬಹ್ರೇನ್, ಕುವೈತ್, ಸಿಂಗಾಪುರ್, ಮಲೇಷ್ಯಾ, ಫಿಲಿಪೈನ್ಸ್, ಓಮನ್, ಕತಾರ್, ಸೌದಿ ಅರೇಬಿಯಾ ಮುಂತಾದ 12 ದೇಶಗಳಿಂದ ಸಿಲುಕಿರುವ ಸುಮಾರು 15 ಸಾವಿರ ಭಾರತೀಯರನ್ನು ಮರಳಿ ಕರೆತರುತ್ತಿದೆ.
ಅಧಿಕೃತ ಮೂಲಗಳ ಪ್ರಕಾರ, ಒಟ್ಟು 67,833 ಜನರನ್ನು 'ವಂದೇ ಭಾರತ್ ಮಿಷನ್' ಅಡಿಯಲ್ಲಿ ಮನೆಗೆ ಮರಳಲು ಅರ್ಹರು ಎಂದು ಕಂಡುಬಂದಿದೆ. ಕರ್ನಾಟಕ – 2,786,ಕೇರಳ – 25,246,ತಮಿಳುನಾಡು – 6,617,ಮಹಾರಾಷ್ಟ್ರ – 4,341,ಉತ್ತರ ಪ್ರದೇಶ – 3,715ರಾಜಸ್ಥಾನ – 3,320,ತೆಲಂಗಾಣ – 2,796,ಆಂಧ್ರಪ್ರದೇಶ – 2,445,ಗುಜರಾತ್ – 2,330, ದೆಹಲಿ – 2,232 ಜನರು ತಮ್ಮನ್ನು ಸ್ಥಳಾಂತರಿಸಲು ಕೋರಿದ್ದಾರೆ ಎಂದು ತಿಳಿದುಬಂದಿದೆ.