ನವದೆಹಲಿ, ಮೇ 09 (Daijiworld News/MB) : ಪ್ರಿಯಕರನೊಂದಿಗೆ ಸೇರಿ ತನ್ನ ಪತಿಯನ್ನು ಹತ್ಯೆಗೈದು ಕೊರೊನಾ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಕಥೆ ಕಟ್ಟಿದ ಘಟನೆ ವಾಯುವ್ಯ ದೆಹಲಿಯ ಅಶೋಕ್ ವಿಹಾರ್ನಲ್ಲಿ ನಡೆದಿದೆ.
ಹತ್ಯೆಯಾದ ಶರತ್ ದಾಸ್ (46)ನ ಅಶೋಕ್ ವಿಹಾರ್ ಪ್ರದೇಶದಲ್ಲಿ ಅಂಗಡಿಯನ್ನು ನಡೆಸುತ್ತಿದ್ದು ಪತ್ನಿ ಅನಿತಾ ತನ್ನ ನೆರೆಮನೆಯಾಕೆಯಲ್ಲಿ ಕೊರೊನಾದಿಂದಾಗಿ ತನ್ನ ಪತಿ ಮೇ 2 ರಂದು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದು ಈ ಬಗ್ಗೆ ನೆರೆಮನೆಯಾಕೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತಮ್ಮ ಗಮನಕ್ಕೆ ಬರದೆಯೇ ಕೊರೊನಾ ಸೋಂಕಿನಿಂದಾಗಿ ವ್ಯಕ್ತಿ ಮೃತಪಟ್ಟ ಸುದ್ದಿ ತಿಳಿದ ಪೊಲೀಸರು ಅನಿತಾಳ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಆಕೆಯ ಬಳಿ ತನ್ನ ಪತಿ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎಂದು ಸಾಬೀತು ಪಡಿಸುವ ಯಾವ ದಾಖಲೆಗಳೂ ಇರಲಿಲ್ಲ. ಅಷ್ಟು ಮಾತ್ರವಲ್ಲದೇ ಶರತ್ನ ಆರೋಗ್ಯದಲ್ಲಿ ಯಾವ ತೊಂದರೆಯೂ ಇರಲಿಲ್ಲ ಎಂದು ಸುತ್ತಮುತ್ತಲಿನ ಜನರು ಪೊಲೀಸರಿಗೆ ತಿಳಿಸಿದ್ದಾರೆ.
ಈ ಹಿನ್ನಲೆಯಲ್ಲಿ ಶವದ ಮರಣೋತ್ತರ ಪರೀಕ್ಷೆ ಮಾಡಲಾಗಿದ್ದು ಆತನನ್ನು ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಪೊಲೀಸರು ಅನಿತಾಳನ್ನು ವಿಚಾರಿಸಿದಾಗ ಆಕೆ ಹತ್ಯೆ ಮಾಡಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದು ತನ್ನ ಪ್ರಿಯಕರ ಹಾಗೂ ತಾನು ಸೇರಿ ಕೃತ್ಯ ಎಸಗಿರುವುದಾಗಿ ಹೇಳಿದ್ದು ಅವರು ಶವವನ್ನು ಸುಟ್ಟುಹಾಕುವ ಯೋಜನೆಯನ್ನು ಮಾಡಿದ್ದರು ಎಂದು ಹೇಳಲಾಗಿದೆ.