ರಾಯಚೂರು, ಮೇ 09 (DaijiworldNews/PY) : ಕುಡಿಯಲು ಮದ್ಯ ನೀಡದ ಕಾರಣ ಬಾರ್ ಮಾಲೀಕನ ಮೇಲೆ ಮದ್ಯವ್ಯಸನಿಗಳು ಹಲ್ಲೆ ಮಾಡಿದ ಘಟನೆ ದೇವದುರ್ಗ ಪಟ್ಟಣದಲ್ಲಿ ನಡೆದಿದೆ.
ಜಾಲಹಳ್ಳಿ ರಸ್ತೆಯಲ್ಲಿರುವ ಕ್ಷೀರಸಾಗರ ಬಾರ್ ಹಾಗೂ ರೆಸ್ಟೋರೆಂಟ್ ಮಾಲೀಕ ರವೀಂದ್ರ ಅಕ್ಕರಿಕೆ ಅವರ ಮೇಲೆ ಮೂವರು ಮದ್ಯವ್ಯಸನಿಗಳು ಕುಡಿಯಲು ಮದ್ಯ ನೀಡದಕ್ಕಾಗಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಶುಕ್ರವಾರ ಸಂಜೆ ಬಾರ್ ಮುಂಭಾಗದಲ್ಲಿ ದೇವದುರ್ಗದ ಅಂಜಳ ಗ್ರಾಮದ ಮೂವರು ಮದ್ಯವ್ಯಸನಿಗಳು ಮದ್ಯ ನೀಡುವಂತೆ ಮಾಲೀಕನನ್ನು ಕೇಳಿದ್ದಾರೆ. ಆದರೆ, ಬಾರ್ ಪರವಾನಗಿ ಸಿಎಲ್-7 ಹೊಂದಿದ್ದು, ಸರ್ಕಾರ ಬಾರ್ ಹಾಗೂ ರೆಸ್ಟೋರೆಂಟ್ ತೆರೆಯಲು ಅನುಮತಿ ಕೊಟ್ಟಿಲ್ಲ. ಅನುಮತಿ ನೀಡದ ಕಾರಣ ಬಾರ್ ಅಂಗಡಿ ತೆರೆಯುವುದಿಲ್ಲ ಎಂದು ಬಾರ್ ಮುಂಭಾಗ ಸ್ವಚ್ಛತಾ ಕಾರ್ಯದಲ್ಲಿದ್ದ ಬಾರ್ ಮಾಲೀಕ ತಿಳಿಸಿದ್ದಾರೆ.
ಆದರೆ, ಬಾರ್ ಮಾಲೀಕನ ಮಾತು ಕೇಳದ ಮೂವರು ಮದ್ಯವ್ಯಸನಿಗಳು ರವೀಂದ್ರ ಜೊತೆ ಮದ್ಯ ಕೊಡುವಂತೆ ವಾಗ್ವಾದ ಮಾಡಿದ್ದಾರೆ. ಸರ್ಕಾರ ಮದ್ಯ ಮಾರಾಟ ಮಾಡಲು ಅನುಮತಿ ನೀಡಿಲ್ಲ. ಬಾರ್ಗೆ ಅಬಕಾರಿ ಇಲಾಖೆ ಸೀಲ್ ಹಾಕಿದೆ. ಹಾಗಾಗಿ ಮದ್ಯ ಮಾರಾಟ ಮಾಡಲು ಆಗುವುದಿಲ್ಲ ಎಂದು ಮಾಲೀಕ ಹೇಳಿದ್ದಾರೆ. ಆದರೂ ಮಾಲೀಕನ ಮಾತು ಕೇಳದೆ ಆತನ ಮೇಲೆ ಹಲ್ಲೆ ಮಾಡಿದ್ದಾರೆ.
ಬಾರ್ ಮಾಲೀಕ ರವೀಂದ್ರ ಅವರಿಗೆ ಕಲ್ಲಿನಿಂದ ಹೊಡೆದಿದ್ದು, ತೀವ್ರ ರಕ್ತಸ್ರಾವದಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಹಿನ್ನಲೆ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.