ಹೈದರಾಬಾದ್, ಮೇ 09 (DaijiworldNews/PY) : ಕೊರೊನಾ ಲಾಕ್ಡೌನ್ನಿಂದ ವಿವಾಹ ಮುಂದೂಡಿದ ಕಾರಣ ಮನನೊಂದು ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ತೆಲಂಗಾಣದ ಆದಿಲಾಬಾದ್ ಜಿಲ್ಲೆಯಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳನ್ನು ಪೆಂಡೂರ್ ಗಣೇಶ್ (22) ಮತ್ತು ಸೋಯಂ ಸೀತಾಬಾಯಿ (20) ಎನ್ನಲಾಗಿದೆ. ನಾರ್ನೂರ್ ಮಂಡಲದ ಕಣ್ಣಾಪುರ ಗ್ರಾಮದ ಕೃಷಿ ತೋಟದಲ್ಲಿ ಶುಕ್ರವಾರ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಎರಡು ವರ್ಷಗಳಿಂದ ರೈತ ಗಣೇಶ್ ಹಾಗೂ ಅದೇ ಊರಿನ ಸೀತಾಬಾಯಿ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ತಮ್ಮ ಪ್ರೀತಿಯನ್ನು ಇಬ್ಬರು ಕೂಡಾ ತಮ್ಮ ಮನೆಯಲ್ಲಿ ಹೇಳಿದ್ದಾರೆ. ಇವರ ವಿವಾಹಕ್ಕೆ ಎರಡು ಮನೆಯವರೂ ಸಮ್ಮತಿ ನೀಡಿದ್ದರು. ಹಾಗಾಗಿ ಗಣೇಶ್ ಹಾಗೂ ಸೀತಾಬಾಯಿ ನಿಶ್ಚಿತಾರ್ಥ ಕೆಲವು ತಿಂಗಳ ಹಿಂದೆ ನಡೆದಿತ್ತು.
ಇವರ ವಿವಾಹವು ಎಪ್ರಿಲ್ನಲ್ಲಿ ನಿಗದಿಯಾಗಿತ್ತು. ಆದರೆ ಮಹಾಮಾರಿ ಕೊರೊನಾದಿಂದ ದೇಶವೇ ಲಾಕ್ಡೌನ್ ಆಗಿದ್ದು, ಹಾಗಾಗಿ ಎರಡು ಕುಟುಂಬದವರು ವಿವಾಹವನ್ನು ಮುಂದೂಡಲು ತೀರ್ಮಾನ ಮಾಡಿದ್ದರು. ಈ ಕಾರಣದಿಂದ ಪ್ರೇಮಿಗಳು ಬೇಸರ ಮಾಡಿಕೊಂಡಿದ್ದರು ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ತೆಲಂಗಾಣದಲ್ಲಿ ಲಾಕ್ಡೌನ್ ವಿಸ್ತರಣೆಯಾಗಿದೆ. ವಿವಾಹದ ಬಗ್ಗೆ ಹಲವಾರು ಕನಸುಗಳನ್ನು ಕಟ್ಟಿಕೊಂಡಿದ್ದ ಪ್ರೇಮಿಗಳು ಇನ್ನಷ್ಟು ಖಿನ್ನತೆಗೆ ಒಳಗಾಗಿದ್ದು, ವಿವಾಹ ಮುಂದೂಡಿದ ಕಾರಣ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಾಗಿ ಕುಟುಂಬದವರು ತಿಳಿಸಿದ್ದಾರೆ.
ಹೊಲದಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಉಟ್ನೂರ್ ನ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಅನುಮಾನಾಸ್ಪದ ಸಾವು ಎಂಬುದಾಗಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಪ್ರಾರಂಭಿಸಲಾಗಿದೆ ಎಂದು ಸಬ್ ಇನ್ಸ್ಪೆಕ್ಟರ್ ಎಂ.ವಿಜಯ್ ಹೇಳಿದ್ದಾರೆ.