ನವದೆಹಲಿ, ಮೇ 09 (Daijiworld News/MSP): ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗುವವರಿಗೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಸಚಿವಾಲಯ ಹೊಸ ಆದೇಶ ಹೊರಡಿಸಿದೆ.
ಪರಿಷ್ಕೃತ ಡಿಸ್ಚಾರ್ಜ್ ನೀತಿ ಪ್ರಕಾರ ಇನ್ನು ಮುಂದೆ, "ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಅಥವಾ ರೋಗನಿರೋಧಕ ಶಕ್ತಿಯನ್ನು ಹೊಂದಿರದ COVID-19 ರೋಗಿಗಳನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಮೊದಲು ಆರ್ಟಿ-ಪಿಸಿಆರ್ ಮೂಲಕ ಕೋವಿಡ್ ನೆಗೆಟಿವ್ ಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ. ಈ ಹಿಂದಿನ ನಿಯಮಗಳ ಪ್ರಕಾರ, ರೋಗಿಯ ರೋಗಲಕ್ಷಣಗಳ ತೀವ್ರತೆಯನ್ನು ಲೆಕ್ಕಿಸದೆ, ಶಂಕಿತ 14 ನೇ ದಿನದ ಪರೀಕ್ಷೆಯ ವರದಿಯಲ್ಲಿ ನೆಗೆಟಿವ್ ಬಂದರೆ ಆತನನ್ನು 24 ಗಂಟೆಗಳ ಅವಧಿಯಲ್ಲಿ ಬಿಡುಗಡೆ ಮಾಡಲಾಗುತ್ತಿತ್ತು.
ಆದರೆ ಇದೀಗ ಪರಿಷ್ಕೃತ ಡಿಸ್ಚಾರ್ಜ್ ನೀತಿಯನ್ನು 3 ಹಂತದಲ್ಲಿ ವರ್ಗೀಕರಣ ಮಾಡಲಾಗಿದೆ. ಕೋವಿಡ್ ಸೌಲಭ್ಯಗಳ ಮಾರ್ಗಸೂಚಿಯೊಂದಿಗೆ ಮತ್ತು ಕ್ಲಿನಿಕಲ್ ತೀವ್ರತೆಯ ಆಧಾರದ ಮೇಲೆ ರೋಗಿಗಳನ್ನು ಮೂರು ಹಂತದ ವರ್ಗೀಕರಣ ಮಾಡಲಾಗಿದ್ದು, ಎಲ್ಲಾ ವರ್ಗಗಳಿಗೂ ಪ್ರತ್ಯೇಕ ಡಿಸ್ಚಾರ್ಜ್ ಮಾರ್ಗ ಸೂಚಿ ರೂಪಿಸಲಾಗಿದೆ" ಎಂದು ಸಚಿವಾಲಯ ತಿಳಿಸಿದೆ.
ಮೊದಲನೆಯದಾಗಿದೆ ಪೂರ್ವ-ರೋಗಲಕ್ಷಣ ಅಥವಾ ಅಲ್ಪ ಅಥವಾ ಅತ್ಯಲ್ಪ ರೋಗಲಕ್ಷಣದ ಪ್ರಕರಣ: ಕೋವಿಡ್ ಆರೈಕೆ ಕೇಂದ್ರಗಳಿಗೆ ದಾಖಲಾದ ಇಂತಹ ರೋಗಿಗಳನ್ನು ದಿನನಿತ್ಯ ತಪಾಸಣೆ ಮಾಡಲಾಗುವುದು. 10 ದಿನಗಳವರೆಗೆ ಲಕ್ಷಣ ಕಂಡುಬರದೆ ಇದ್ದರೆ, ಅಥವಾ ಮೂರು ದಿನಗಳ ರೋಗ ಲಕ್ಷಣ ಕಾಣಿಸದಿದ್ದರೆ, ರೋಗಿಯನ್ನು ಬಿಡುಗಡೆ ಮಾಡಬಹುದಾಗಿದೆ. ಆದರೆ ಇವರು ಬಿಡುಗಡೆಯಾಗುವ ಮೊದಲು ಇವರು ಕೋವಿಡ್ ಪರೀಕ್ಷೆಗಳಿಗೆ ಒಳಗಾಗಬೇಕಾಗಿಲ್ಲ. ಆದರೆ ಈ ಹಿಂದೆ ಕೊರೊನಾ ನೆಗೆಟಿವ್ ಎಂದು ಖಾತರಿಯಾದ್ರೆ ಮಾತ್ರ ಇಂತವರನ್ನು ಬಿಡುಗಡೆ ಮಾಡಲಾಗುತ್ತಿತ್ತು. ಆದರೆ ಇವರು ಮುಂದಿನ 7 ದಿನಗಳವರೆಗೆ ತಮ್ಮ ಮನೆಯಲ್ಲೇ ಪ್ರತ್ಯೇಕವಾಗಿ ಕ್ವಾರೆಂಟೈನ್ ಗೆ ಒಳಪಡಬೇಕು.
ಎರಡನೆಯದು, ಮಧ್ಯಮ ಅಥವಾ ಸಾಧಾರಣ ಪ್ರಕರಣ :
ಇಲ್ಲಿ ದೇಹದ ಉಷ್ಟತೆಯ ಬಗ್ಗೆ ಪರೀಕ್ಷೆಗೆ ಒಳಪಡಬೇಕಾಗುತ್ತದೆ. ಉಸಿರಾಟದ ಸಮಸ್ಯೆ ಇಲ್ಲದಿರುವುದು, ಅಲ್ಲದೆ ಕೃತಕ ಆಮ್ಲಜನಕ ಅಗತ್ಯವಿಲ್ಲದೆ ಉಸಿರಾಡಲು ಸಮರ್ಥರಾಗುವುದು, ಆಂಟಿ ಪೈರೆಟಿಕ್ಸ್ ಇಲ್ಲದೆ ಇದ್ದಾಗ ಕೂಡಾ ಜ್ವರ ಅಥವಾ ಜ್ವರದ ಲಕ್ಷಣ ಕಾಣಿಸದಿರುವುದು ಇಂತಹ ಸೋಂಕಿತರಿಗೂ ಬಿಡುಗಡೆ ಮೊದಲು ಕೊರೊನಾ ನೆಗೆಟಿವ್ ಪರೀಕ್ಷೆಯ ಅಗತ್ಯವಿಲ್ಲ. ಆದರೆ ಇವರು ಮುಂದೆ 7 ದಿನಗಳವರೆಗೆ ತಮ್ಮ ಮನೆಯಲ್ಲೇ ಪ್ರತ್ಯೇಕವಾಗಿ ಕ್ವಾರೆಂಟೈನ್ ಗೆ ಒಳಪಡಬೇಕು.
ಮೂರನೆಯದು ಎಚ್ಐವಿ ರೋಗಿಗಳು, ಅಂಗಾಂಗ ಕಸಿ ಮಾಡಿಕೊಂಡವರು, ಮತ್ತು ಇತರ ಮಾರಣಾಂತಿಕ ರೋಗ ಸೇರಿದಂತೆ ತೀವ್ರತರವಾದ ಪ್ರಕರಣಗಳು. ಇವರ ಡಿಸ್ಚಾರ್ಜ್ ಗೆ ಸಂಬಂಧಿಸಿದಂತೆ ಈ ವರ್ಗದ ಸೋಂಕಿತರು ಚೇತರಿಸಿಕೊಂಡ ಬಳಿಕ ಡಿಸ್ಚಾರ್ಜ್ ಗೆ ಮೊದಲು ಆರ್ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ
ಇದಲ್ಲದೆ ಯಾವುದೇ ಸಮಯದಲ್ಲಿ, COVID-19 ಆರೈಕೆ ಕೇಂದ್ರದಿಂದ ರೋಗಿಯನ್ನು ಡಿಸ್ಚಾರ್ಜ್ ಮಾಡುವ ಮೊದಲು, ಆತನ ದೇಹದಲ್ಲಿ ಆಮ್ಲಜನಕದ ಶುದ್ಧತ್ವವು 95% ಕ್ಕಿಂತ ಕಡಿಮೆಯಾದರೆ, ರೋಗಿಯನ್ನು ಸುಸಜ್ಜಿತ COVID-19 ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಲಾಗುತ್ತದೆ.
ಕೋವಿಡ್ -19 ಸೋಂಕಿನಿಂದ ಸಾವಿನ ಸಂಖ್ಯೆ 1,981 ಕ್ಕೆ ಏರಿಕೆಯಾಗಿದ್ದು, ಶನಿವಾರ ಪ್ರಕರಣಗಳ ಸಂಖ್ಯೆ 59,662 ಕ್ಕೆ ಏರಿದ್ದು, ಕಳೆದ 24 ಗಂಟೆಗಳಲ್ಲಿ 3,320 ಪ್ರಕರಣಗಳ ಹೆಚ್ಚಳವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.