ಬೆಂಗಳೂರು, ಮೇ 09 (Daijiworld News/MSP): ರಾಜ್ಯದಲ್ಲಿ ಲಾಕ್ ಡೌನ್ ಸಡಿಲಿಕೆ ಬಳಿಕ ದಾಖಲೆಯ ಪ್ರಮಾಣದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಶನಿವಾರ ಒಂದೇ ದಿನ ಒಟ್ಟು 41 ಮಂದಿಯಲ್ಲಿ ಪಾಸಿಟಿವ್ ಬಂದಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 794ಕ್ಕೆ ಏರಿಕೆಯಾಗಿದೆ.
ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಶುಕ್ರವಾರ ಸಂಜೆ 5ರಿಂದ ಇಂದು ಸಂಜೆ 5 ಗಂಟೆಯ ಅವಧಿಯಲ್ಲಿ ಹೊಸದಾಗಿ 41 ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 794ಕ್ಕೆ ಏರಿಕೆಯಾಗಿರುವುದಾಗಿ ತಿಳಿದು ಬಂದಿದೆ..
ದಾವಣಗೆರೆ 06, ಬೆಂಗಳೂರು 12, ತುಮಕೂರು 04, ವಿಜಯಪುರ 01, ಬೀದರ್ 03, ದಕ್ಷಿಣ ಕನ್ನಡ 03, ಉತ್ತರ ಕನ್ನಡ 08, ಚಿಕ್ಕಬಳ್ಳಾಪುರದಲ್ಲಿ ಒಬ್ಬರಿಗೆ ಮತ್ತು ಚಿತ್ರದುರ್ಗ ಮೂವರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಈ ಮೂಲಕ 41 ಜನರಿಗೆ ಕೊರೋನಾ ಸೋಂಕು ತಗುಲಿರುವುದು ಖಚಿತವಾಗಿದೆ.
ಈ ಪೈಕಿ ಭಟ್ಕಳದ 1.5 ವರ್ಷದ ಗಂಡು ಮಗು, 2 ವರ್ಷ 6 ತಿಂಗಳ ಹೆಣ್ಣು ಮಗುವಿಗೆ ಸೋಂಕು ದೃಢಪಟ್ಟಿವೆ. ಅಲ್ಲದೇ, ಬೀದರ್ ನಲ್ಲಿ 12 ವರ್ಷದ ಬಾಲಕಿ, ವಿಜಯಪುರದ 11 ವರ್ಷದ ಬಾಲಕಿಯಲ್ಲಿ ಕೊರೋನ ಪಾಸಿಟಿವ್ ಬಂದಿದೆ.
ಇನ್ನೂ ಕಿಲ್ಲರ್ ಕೊರೊನಾಗೆ ಇದುವರೆಗೆ 30 ಜನರು ರಾಜ್ಯದಲ್ಲಿ ಸಾವನ್ನಪ್ಪಿದ್ದು, ಸೋಂಕಿತರಾದಂತ 386 ಜನರು ಸಂಪೂರ್ಣವಾಗಿ ಗುಣಮುಖರಾಗುವ ಮೂಲಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.