ಬೆಂಗಳೂರು, ಮೇ 09 (DaijiworldNews/PY) : ಯಾರು ಬೇಕಾದರೂ ಯಾವುದೇ ಧರ್ಮಕ್ಕೆ ಸೇರಬಹುದು. ಅದು ಅವರ ಹಕ್ಕು. ಮತಾಂತರ ಮಾಡುವ ವಿಚಾರದಲ್ಲಿ ಒತ್ತಾಯವಿರಬಾರದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಕೋಲಾರದ ಮಾಲೂರಿನಲ್ಲಿ ತಬ್ಲೀಘಿಗಳಿಂದ ಮತಾಂತರ ವಿಚಾರವಾಗಿ ಮಾತನಾಡಿದ ಅವರು, ಯಾರು ಬೇಕಾದರೂ ಯಾವುದೇ ಧರ್ಮಕ್ಕೆ ಸೇರಬಹುದು. ಅದು ಅವರ ಹಕ್ಕು ಎಂದು ತಿಳಿಸಿದರು.
ಬಳಿಕ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಅವರು, ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಅಧಿಕವಾಗಲು ಸರ್ಕಾರದ ನೀತಿಯೇ ಕಾರಣ. ಇನ್ನೂ ಸಹ ಜನರಿಗೆ ಸಾಮಾಜಿಕ ಅಂತರದ ಜ್ಞಾನ ಸಂಪೂರ್ಣವಾಗಿ ಬಂದಿಲ್ಲ. ಆತುರವಾಗಿ ಸರ್ಕಾರ ಲಾಕ್ಡೌನ್ ಸಡಿಲಿಕೆ ಮಾಡಿದ್ದು ಸರಿಯಲ್ಲ. ಕೊರೊನಾ ಸೋಂಕು ಹೆಚ್ಚಲು ಲಾಕ್ಡೌನ್ ಸಡಿಲಿಕೆಯೇ ಕಾರಣ ಎಂದರು.
ಕೊರೊನಾದೊಂದಿಗೆ ಜೀವಿಸುವುದು ಕಲಿಯಿರಿ ಎಂಬ ಕೇಂದ್ರದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕೊರೊನಾದೊಂದಿಗೆ ಬದುಕಬೇಕು ಎನ್ನುವುದಲ್ಲ. ಕೊರೊನಾ ಸೋಂಕು ತಡೆಗೆ ಯಾವುದೇ ಔಷಧ ಇಲ್ಲದ ಕಾರಣ ಆದಷ್ಟು ಬೇಗ ಅದನ್ನು ಕಂಡುಹಿಡಯುವ ಕಾರ್ಯವನ್ನು ಮಾಡಬೇಕು. ಜಗತ್ತಿನ ಯಾವುದೇ ದೇಶ ಕೂಡಾ ಔಷಧ ಕಂಡುಹಿಡಿಯಲಿಲ್ಲ. ಹಾಗಾಗಿ ಔಷಧಿ ಕಂಡುಹಿಡಿಯುವ ಕಾರ್ಯವನ್ನು ಕೇಂದ್ರ ಸರ್ಕಾರ ಮಾಡಲಿ. ಆಗ ಕೊರೊನಾದೊಂದಿಗೆ ನಾವು ಬದುಕುವುದನ್ನು ಕಲಿಯೋಣ ಎಂದು ಟೀಕಿಸಿದರು.