ರಾಯ್ಪುರ, ಮೇ 10 (DaijiworldNews/PY) : ಛತ್ತೀಸ್ಗಡದ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ (74) ಅವರ ಆರೋಗ್ಯ ಸ್ಥಿತಿ ತೀರಾ ಗಂಭೀರವಾಗಿದ್ದು, ವೆಂಟಿಲೇಟರ್ನಲ್ಲಿ ಇರಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ತೀವ್ರವಾಗಿ ಅಸ್ವಸ್ಥಗೊಂಡ ಕಾರಣ ಶನಿವಾರ ಅವರನ್ನು ರಾಯ್ಪುರದ ಶ್ರೀ ನಾರಾಯಣ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ತಂದೆಯ ಆರೋಗ್ಯ ಸ್ಥಿತಿ ತೀರಾ ಗಂಭೀರವಾಗಿದ್ದು, ಛತ್ತೀಸ್ಗಡದ ಜನರ ಪ್ರಾರ್ಥನೆ ಹಾಗೂ ಶುಯಭ ಹಾರೈಕೆ ಅವರಿಗೆ ಅಗತ್ಯವಿದೆ ಎಂದು ಅಜಿತ್ ಜೋಗಿ ಅವರ ಪುತ್ರ ಅಮಿತ್ ಜೋಗಿ ತಿಳಿಸಿದ್ದಾರೆ.
ಶನಿವಾರ ಮಧ್ಯಾಹ್ನ ಅಜಿತ್ ಜೋಗಿ ಅವರು ಅಸ್ವಸ್ಥಗೊಂಡು ಕುಸಿದುಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಹೃದಯಾಘಾತ ಸಂಭವಿಸಿದೆ ಎನ್ನಲಾಗಿದೆ.
2004ರಲ್ಲಿ ಅಪಘಾತವೊಂದರಲ್ಲಿ ಗಾಯಗೊಂಡಿದ್ದ ಅಜಿತ್ ಜೋಗಿ ಅವರು ನಂತರ ಗಾಲಿ ಕುರ್ಚಿಯನ್ನು ಅವಲಂಬಿಸಿದ್ದರು.
ಅಜಿತ್ ಜೋಗಿ ಅವರು ಮೊದಲು ಅಧಿಕಾರಿಯಾಗಿ ವೃತ್ತಿ ಜೀವನ ಆರಂಭಿಸಿದ್ದು, ನಂತರ ರಾಜಕಾರಣದತ್ತ ಮುಖ ಮಾಡಿದರು. 2000ನೇ ಇಸವಿಯಲ್ಲಿ ಮಧ್ಯಪ್ರದೇಶವನ್ನು ವಿಭಜಿಸಿ ಛತ್ತೀಸ್ಗಡ ರಚನೆಯಾದ ನಂತರ ನಡೆದ ಪ್ರಥಮ ಚುನಾವಣೆಯಲ್ಲಿ ಕಾಂಗ್ರೆಸ್ ಜಯ ಪಡೆದುಕೊಂಡಿತ್ತು. ಆ ಸಂದರ್ಭ ಕಾಂಗ್ರೆಸ್ನಲ್ಲಿದ್ದ ಅಜಿತ್ ಜೋಗಿ ಅವರು ಮುಖ್ಯಮಂತ್ರಿಯಾದರು. ಅವರು 2000ನೇ ಇಸವಿಯ ನವೆಂಬರ್ನಿಂದ 2003ರ ನವೆಂಬರ್ವರೆಗೆ ಛತ್ತೀಸ್ಗಡದ ಮೊದಲ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ.
2016ರಲ್ಲಿ ಅವರು ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿ ಜನತಾ ಕಾಂಗ್ರೆಸ್ ಛತ್ತೀಸ್ಗಡ (ಜೆ) ಪಕ್ಷವನ್ನು ಸ್ಥಾಪನೆ ಮಾಡಿದ್ದಾರೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಮಾಯಾವತಿ ನೇತೃತ್ವದ ಬಿಎಸ್ಪಿ ಜೊತೆ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ಹಾಗೂ ಬಿಜೆಪಿ ವಿರುದ್ದ ಜನತಾ ಕಾಂಗ್ರೆಸ್ ಛತ್ತೀಸ್ಗಡ ಸೆಣಸಿತ್ತು. ಆದರೆ, ಆ ಸಂದರ್ಭ, ಕಾಂಗ್ರೆಸ್ ಗೆಲುವು ಸಾಧಿಸಿ ಭೂಪೇಶ್ ಬಘೆಲ್ ಮುಖ್ಯಮಂತ್ರಿಯಾದರು.