ಬೆಂಗಳೂರು, ಮೇ 10 (DaijiworldNews/PY) : ದೇಶಾದ್ಯಂತ ಮತ್ತು ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂತು ಎನ್ನುವ ಸಮಯದಲ್ಲಿ ಸರ್ಕಾರ ಜಾರಿಗೊಳಿಸಿದ ಲಾಕ್ಡೌನ್ ಅನ್ನು ಉಲ್ಲಂಘನೆ ಮಾಡಿ ಚಿತ್ರದುರ್ಗ, ದಾವಣಗೆರೆ, ಬೀದರ್, ಬೆಳಗಾವಿ, ಬಾಗಲಕೋಟ, ಬೆಂಗಳೂರು, ಕಲಬುರಗಿ ಸೇರಿದಂತೆ ಹಲವು ಕಡೆ ಕೊರೊನಾ ಸೋಂಕು ವೇಗವಾಗಿ ವ್ಯಾಪಿಸಲು ತಬ್ಲೀಘಿ ಜಮಾತ್ಗಳೇ ನೇರ ಕಾರಣ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾದ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಬ್ಲೀಘಿಗಳಿಂದ ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಹಿಂದೂ ಯುವಕರ ಮತಾಂತರ ನಡೆಯುತ್ತಿರುವ ವಿಚಾರವಾಗಿ ಖುದ್ದು ಮಾಲೂರು ತಹಶೀಲ್ದಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಈ ತಬ್ಲೀಘಿಗಳು ಪೊಲೀಸರಿಗೆ ಸಿಗದೇ ತಪ್ಪಿಸಿಕೊಂಡಿದ್ದಾರೆ. ಆದರೆ. ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮತಾಂತರ ಆಗುವುದು ತಪ್ಪಲ್ಲ ಎಂದು ಸಮರ್ಥನೆ ಮಾಡಿಕೊಂಡಿದ್ದು, ಆ ಮುಖಾಂತರ ಬೆಂಬಲ ವ್ಯಕ್ತಡಿಸುತ್ತಿರುವುದು ದುರಂತ ಹಾಗೂ ಖಂಡನಾರ್ಹ ಎಂದು ತಿಳಿಸಿದ್ದಾರೆ.
ಮತ ಬ್ಯಾಂಕ್ ರಾಜಕಾರಣಕ್ಕಾಗಿ, ಕೀಳುಮಟ್ಟದ ರಾಜಕೀಯ ಲಾಭಕ್ಕೋಸ್ಕರ ಒಂದು ಸಮುದಾಯವನ್ನು ಓಲೈಸುವುದು ಕಾಂಗ್ರೆಸ್ ಜಾಯಮಾನವಾಗಿರುವುದು ಖೇದಕರವಾಗಿದೆ ಎಂದರು.
ತಬ್ಲೀಘಿಗಳು ಆಸ್ಪತ್ರೆಯಲ್ಲಿದ್ದ ಸಂದರ್ಭ ಅವರ ಆರೋಗ್ಯ ರಕ್ಷಣೆ ಮಾಡುವಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ಪೊಲೀಸ್ ಸೇರಿದಂತೆ ಕೊರೊನಾ ವಾರಿಯರ್ಸ್ ಸಿಬ್ಬಂದಿಗಳ ಮೇಲೆ ಉಗುಳುವುದು, ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದರು. ಕಾಂಗ್ರೆಸ್ನ ಯಾರೊಬ್ಬರೂ ಈ ವಿಚಾರವಾಗಿ ಮಾತೆತ್ತುವುದಿಲ್ಲ. ಕಾಂಗ್ರೆಸ್ ರಾಷ್ಟ್ರೀಯ ಪಕ್ಷವಾಗಿರುವುದೇ ಈ ದೇಶದ ದುರಂತವಾಗಿದೆ ಎಂದರು.