ಬೆಂಗಳೂರು, ಮೇ 10 (Daijiworld News/MB) : ಅನಿವಾಸಿ ಭಾರತೀಯರ ನೆರವಿಗಾಗಿ ಭಾರತ ಸರ್ಕಾರ ಪ್ರಾರಂಭಿಸಿದ ಅತೀ ದೊಡ್ಡ ಏರ್ ಲಿಫ್ಟ್ ಕಾರ್ಯಾಚರಣೆ ವಂದೇ ಭಾರತ್ ಮಿಷನ್ನಡಿಯಲ್ಲಿ ಲಂಡನ್ನಲ್ಲಿರುವ ಸುಮಾರು 250 ಕನ್ನಡಿಗರು ಭಾನುವಾರ ಭಾರತಕ್ಕೆ ಮರಳಲಿದ್ದಾರೆ.
ಸಾಂದರ್ಭಿಕ ಚಿತ್ರ
ಕೊರೊನಾ ಲಾಕ್ಡೌನ್ನಿಂದಾಗಿ ವಿದೇಶದಲ್ಲಿ ಸಂಕಷ್ಟದಲ್ಲಿರುವ ಭಾರತೀಯರನ್ನು ಆಧ್ಯತೆಯ ಮೇರೆಗೆ ಕರೆತರಲಾಗುತ್ತದೆ. ಮೊದಲ ಹಂತದ ವಂದೇ ಭಾರತ್ ಮಿಷನ್ ಮೇ 7ರಿಂದ ಆರಂಭವಾಗಿದ್ದು ಇಂದು ಬೆಳಗ್ಗೆ 9:45 ಕ್ಕೆ ಲಂಡನ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನ ಹೊರಟಿದ್ದು ರಾತ್ರಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದೆ ಎಂದು ಭಾರತೀಯ ವಿದೇಶಾಂಗ ಇಲಾಖೆಯು ತಿಳಿಸಿದೆ. ಈ ವಿಶೇಷ ವಿಮಾನದ ಮೂಲಕ 250 ಮಂದಿ ಇಂಗ್ಲೆಂಡಿನಿಂದ ಕರುನಾಡಿಗೆ ವಾಪಸ್ ಆಗಲಿದ್ದಾರೆ.
ಲಂಡನ್ನಿಂದ ರಾಜ್ಯಕ್ಕೆ ಬರುವ ಕನ್ನಡಿಗರ ಕ್ವಾರಂಟೈನ್ಗಾಗಿ ಹೋಟೆಲ್, ರೆಸಾರ್ಟ್ಗಳಲ್ಲಿ ವ್ಯವಸ್ಥೆ ಮಾಡಲಾಗಿದ್ದು ಎ ಗ್ರೇಡ್ ಹೊಂದಿರುವವರು ರಾಜೀವ್ ಗಾಂಧಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತದೆ. ಬಿ ಮತ್ತು ಸಿ ಗ್ರೇಡ್ ಹೊಂದಿರುವವರು ಹೋಟೆಲ್ ಹಾಗೂ ರೆಸಾರ್ಟ್ಗಳಲ್ಲಿ ಕ್ವಾರಂಟೈನ್ ಇರಿಸಲಾಗುತ್ತಿದ್ದು ಅದರ ವೆಚ್ಚವನ್ನು ಅವರೇ ಭರಿಸಬೇಕಾಗಿದೆ.
ಲಾಕ್ಡೌನ್ನಿಂದಾಗಿ ವಿವಿಧ ದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ಈ ವಂದೇ ಭಾರತ್ ಮಿಷನ್ ಆರಂಭ ಮಾಡಲಾಗಿದ್ದು ಮೇ 13ಕ್ಕೆ ಮುಕ್ತಾಯವಾಗಲಿದೆ. ಮೇ 15ರಿಂದ ಎರಡನೇ ಹಂತದ ವಂದೇ ಭಾರತ್ ಮಿಷನ್ ಆರಂಭಿಸುವ ನಿರೀಕ್ಷೆಯಿದೆ.