ಲಕ್ನೋ, ಮೇ 10 (DaijiworldNews/PY) : ಲಾಕ್ಡೌನ್ ಜಾರಿಯಲ್ಲಿರುವ ಹಿನ್ನಲೆ ರಾಜ್ಯಕ್ಕೆ ಮರಳುತ್ತಿರುವ 20 ಲಕ್ಷ ವಲಸೆ ಕಾರ್ಮಿಕರಿಗೆ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ಯೋಜನೆ ರೂಪಿಸುತ್ತಿರುವುದಾಗಿ ಉತ್ತರ ಪ್ರದೇಶ ಸರ್ಕಾರ ಘೋಷಣೆ ಮಾಡಿದೆ.
ಕಾರ್ಮಿಕರಿಗೆ ಅವರ ಗ್ರಾಮಗಳು ಹಾಗೂ ಪಟ್ಟಣಗಳಲ್ಲೇ ಉದ್ಯೋಗ ದೊರಕಿಸಿಕೊಡುವಂತೆ ನೀತಿ ರೂಪಿಸಲಾಗುತ್ತಿದ್ದು, ಅಧಿಕಾರಿಗಳಿಗೆ ಕಾರ್ಮಿಕರ ಕೌಶಲಕ್ಕೆ ಸಂಬಂಧಪಟ್ಟಂತೆ ದತ್ತಾಂಶ ರೂಪಿಸಲು ನಿರ್ದೇಶಿಸಲಾಗಿದೆ. ₹15,000 ಕನಿಷ್ಠ ವೇತನದೊಂದಿಗೆ ಉದ್ಯೋಗ ನೀಡಲಾಗುವುದು ಎಂದು ರಾಜ್ಯ ಸರ್ಕಾರದ ಪ್ರಕಟಣೆ ವಿವರಿಸಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಶನಿವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಈ ಪ್ರಕಟಣೆಯನ್ನು ಸರ್ಕಾರ ಬಿಡುಗಡೆ ಮಾಡಿದೆ.
ಹೊಸ ಉದ್ಯಮಗಳಲ್ಲಿ ಮಾತ್ರವಲ್ಲದೇ, ಈಗಾಗಲೇ ಅಸ್ತಿತ್ವದಲ್ಲಿರುವ ಘಟಕಗಳಲ್ಲಿಯೂ ನೇಮಕಾರಿ ಮಾಡಿಕೊಳ್ಳಲಾಗುವುದು. ಅಲ್ಲದೇ, ಗಾರ್ಮೆಂಟ್ ಫ್ಯಾಕ್ಟರಿ ಸೇರಿದಂತೆ ಸುಗಂಧ ದ್ರವ್ಯ, , ಕೃಷಿ ಉತ್ಪನ್ನಗಳು, ಹೂವು ಆಧಾರಿತ ಉತ್ಪನ್ನಗಳು, ಆಹಾರ ಪ್ಯಾಕಿಂಗ್, ಧೂಪದ ಕಡ್ಡಿ ತಯಾರಿಕೆ, ಕಾಂಪೋಸ್ಟ್ ಹಾಗೂ ರಾಸಾಯನಿಕ ಗೊಬ್ಬರ ತಯಾರಿಕೆ ಉದ್ಯಮಗಳಲ್ಲಿಯೂ ಉದ್ಯೋಗ ದೊರಕಿಸಿಕೊಡಲು ಯೋಜನೆ ರೂಪಿಸಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.
ಬಾಂಗ್ಲಾದೇಶ, ವಿಯೆಟ್ನಾಂ, ಚೀನಾ ದೇಶಗಳಲ್ಲಿರುವುದಕ್ಕಿಂತಲೂ ರಾಜ್ಯದಲ್ಲಿ ಚೆನ್ನಾಗಿ ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳನ್ನು ಅಭಿವೃದ್ದಿಪಡಿಸುವತ್ತ ರಾಜ್ಯ ಸರ್ಕಾರ ಶ್ರಮಿಸುತ್ತಿದ್ದು, ಕಾರ್ಮಿಕರಿಗೆ ಸ್ವಸಹಾಯ ಸಂಘಗಳ ಮುಖಾಂತರವೂ ಉದ್ಯೋಗ ಕಲ್ಪಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.