ತಿರುವನಂತಪುರ, ಮೇ 10 (Daijiworld News/MB) : ವಿದೇಶದಿಂದ "ವಂದೇ ಭಾರತ್ ಮಿಷನ್" ಅಡಿಯಲ್ಲಿ ವಿಮಾನಗಳಲ್ಲಿ ವಿದೇಶದಲ್ಲಿ ಸಂಕಷ್ಟದಲ್ಲಿರುವ ಭಾರತೀಯರನ್ನು ಕರೆತರಲಾಗುವ ರೀತಿಯಲ್ಲೇ "ಸಮುದ್ರ ಸೇತು" ಯೋಜನೆಯಡಿ ಮಾಲ್ಡೀವ್ಸ್ನಿಂದ 698 ಭಾರತೀಯರನ್ನು ಭಾನುವಾರ ಬೆಳಿಗ್ಗೆ ಕೇರಳದ ಕೊಚ್ಚಿಗೆ ಕರೆತರಲಾಗಿದೆ.
ಈ 698 ಜನರ ಪೈಕಿ 400 ಮಂದಿ ಕೇರಳದವರಾಗಿದ್ದು, ಉಳಿದ 200 ಮಂದಿ ದೇಶದ ಇತರ ಭಾಗಕ್ಕೆ ಸೇರಿದವರಾಗಿದ್ದಾರೆ. 19 ಮಂದಿ ಗರ್ಭಿಣಿಯರು ಇದ್ದಾರೆ ಎಂದು ಭಾರತೀಯ ನೌಕಾಪಡೆ ತಿಳಿಸಿದೆ.
ಈ 200 ಮಂದಿಯ ಪೈಕಿ 4 ಮಂದಿ ಲಕ್ಷ ದ್ವೀಪದವರಾಗಿದ್ದು, 187 ಮಂದಿ ತಮಿಳುನಾಡು, 9 ಮಂದಿ ತೆಲಂಗಾಣದ, 8 ಮಂದಿ ಆಂಧ್ರ ಪ್ರದೇಶದ , ಹರಿಯಾಣ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ ಮತ್ತು ರಾಜಸ್ಥಾನದ ತಲಾ 3 ಮಂದಿ, ಗೋವಾ ಮತ್ತು ಅಸ್ಸಾಂನ ತಲಾ ಒಬ್ಬರು ತಮ್ಮ ತಾಯ್ನಾಡಿಗೆ ವಾಪಾಸ್ ಆಗಿದ್ದಾರೆ.
ಕೇರಳ ತನ್ನ ರಾಜ್ಯದವರನ್ನು ಅವರವರ ಜಿಲ್ಲೆಗೆ ತಲುಪಿಸುವ ವ್ಯವಸ್ಥೆ ಕಲ್ಪಿಸಿದ್ದು ಸರ್ಕಾರಿ ಬಸ್ಸುಗಳ ವ್ಯವಸ್ಥೆ ಮಾಡಿಕೊಂಡಿದೆ. ಹಾಗೆಯೇ ಪ್ರತಿಯೊಬ್ಬನಿಗೂ ಪೊಲೀಸ್ ಸುಪರ್ದಿಯಲ್ಲಿ ಕ್ವಾರಂಟೈನ್ಗೆ ಅವಕಾಶ ಕಲ್ಪಿಸಿದೆ.
ಈ ಬೆನ್ನಲ್ಲೇ ಮಾಲ್ಡೀವ್ಸ್ನಿಂದ ಹೊರಟಿರುವ ಐಎನ್ಎಸ್ ಮಗರ್ ಕೂಡ, ಕೊಚ್ಚಿಯನ್ನು ತಲುಪಲಿದೆ. ಬ್ರಿಟನ್ನಲ್ಲಿರುವ 326 ಭಾರತೀಯರನ್ನು ಒಳಗೊಂಡ ಏರ್ ಇಂಡಿಯಾ ವಿಮಾನ ಕೂಡ ಭಾನುವಾರ ಬೆಳಿಗ್ಗೆ ಮುಂಬೈ ತಲುಪಿದೆ.