ಬೆಂಗಳೂರು, ಮೇ 10 (Daijiworld News/MB) : "ನೆರೆ ಪರಿಹಾರದ ಪ್ಯಾಕೇಜ್ನಂತೆಯೇ ಕೊರೊನಾ ಲಾಕ್ಡೌನ್ನಿಂದ ಸಂಕಷ್ಟದಲ್ಲಿರುವರಿಗೆ ಸರ್ಕಾರ ಬಿಡುಗಡೆ ಮಾಡಿರುವ ಪ್ಯಾಕೇಜ್ ಬರೀ ಘೋಷಣೆಯಂತಾಗಲಿದೆ" ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವ್ಯಂಗ ಮಾಡಿದ್ದಾರೆ.
ಈ ಕುರಿತು ರಾಜರಾಜೇಶ್ವರಿ ವಿಧಾನ ಸಭಾಕ್ಷೇತ್ರದಲ್ಲಿ ಜೆಡಿಎಸ್ ಮುಖಂಡ ಜಿ.ಕೃಷ್ಣ ಮೂರ್ತಿ ಸುಮಾರು 15 ಸಾವಿರ ಬಡವರಿಗೆ ಉಚಿತ ಆಹಾರ ಸಾಮಗ್ರಿಗಳ ವಿತರಿಸಿದ ಸಂದರ್ಭದಲ್ಲಿ ಆಹಾರ ಸಾಮಗ್ರಿಗಳ ವಿತರಣೆಗೆ ಚಾಲನೆ ನೀಡಿದ ಬಳಿಕ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಅವರು, "ಸರ್ಕಾರ ಈ ಮೊದಲು ನೆರೆಯಿಂದಾಗಿ ನಷ್ಟ ಅನುಭವಿಸಿದವರಿಗೆ ಘೋಷಣೆ ಮಾಡಿದ್ದ ಪ್ಯಾಕೇಜ್ನಂತೆ ಕೊರೊನಾ ಲಾಕ್ಡೌನ್ನಿಂದಾಗಿ ಸಂಕಷ್ಟದಲ್ಲಿರುವವರಿಗೆ ಘೋಷಣೆ ಮಾಡಿರುವ ಪ್ಯಾಕೇಜ್ ಬರೀ ಘೋಷಣೆಯಾಗಲಿದೆ" ಎಂದು ಹೇಳಿದ್ದಾರೆ.
"ಸರ್ಕಾರ ಹಲವು ವರ್ಗಗಳಿಗೆ ಪರಿಹಾರಿ ಘೋಷಣೆ ಮಾಡಿದೆ. ಆದರೆ ಅವರನ್ನು ಗುರುತಿಸುವ ಕೆಲಸ ಈವರೆಗೂ ಮಾಡಿಲ್ಲ. ಇನ್ನು ಅಸಂಘಟಿತ ಕಾರ್ಮಿಕ ವರ್ಗದವರಿಗೆ ಹೇಗೆ ಪರಿಹಾರ ತಲುಪಿಸುತ್ತೀರಿ?" ಎಂದು ಪ್ರಶ್ನಿಸಿದ್ದಾರೆ.