ನವದೆಹಲಿ, ಮೇ 10 (DaijiworldNews/PY) : ಭಾರತ-ಚೀನಾ ಸೇನಾ ಪಡೆಗಳ ಮಧ್ಯೆ ಸಿಕ್ಕಿಂನ ಅಂತರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಘರ್ಷಣೆ ನಡೆದಿದ್ದು, ಉಭಯ ದೇಶಗಳ ಹಲವು ಯೋಧರು ಗಾಯಗೊಂಡಿದ್ಧಾರೆ. ಉತ್ತರ ಸಿಕ್ಕಿಂನ ನಾಕು ಲಾ ಸೆಕ್ಟರ್ನಲ್ಲಿ ಈ ಘಟನೆ ನಡೆದಿದೆ ಎಂದು ವರದಿ ತಿಳಿಸಿದೆ.
ಉಭಯ ದೇಶಗಳ ಸೇನಾ ಪಡೆಗಳ ನಡುವೆ ಮುಖಾಮುಖಿ ಘರ್ಷಣೆ ನಡೆದಿದ್ದು, ಉಭಯ ಕಡೆಯ ಹಲವು ಯೋಧರಿಗೆ ಗಾಯವಾಗಿದೆ. ಸ್ಥಳೀಯ ಮಟ್ಟದ ಮಾತುಕತೆ ಹಾಗೂ ಸಂಧಾನ ಮಾಡುವ ಮೂಲಕ ಘರ್ಷಣೆ ತಿಳಿಗೊಳಿಸಲಾಗಿದ ಎಂಬುದಾಗಿ ಸೇನಾಗಳು ಮೂಲಗಳು ತಿಳಿಸಿವೆ.
ಈ ಘರ್ಷಣೆಯು ಒಂದು ತಾತ್ಕಾಲಿಕ ಮುಖಾಮುಖಿಯಷ್ಟೆ. ಇಂತಹ ಘಟನೆಗಳು ಉಭಯ ರಾಷ್ಟ್ರಗಳ ನಡುವೆ ದೀರ್ಘಾವಧಿಯ ಗಡಿ ಸಮಸ್ಯೆ ಬಗೆಹರಿಯದ ಕಾರಣದಿಂದ ಆಗಾಗ ನಡೆಯುತ್ತಿವೆ. ಇಂತಹ ಸಮಯದಲ್ಲಿ ಪರಸ್ಪರ ಶಿಷ್ಟಾಚಾರ ಪಾಲಿಸುವ ಮುಖಾಂತರ ಸಮಸ್ಯೆಗಳನ್ನು ಉಭಯ ದೇಶದ ಪಡೆಗಳು ಸರಿಪಡಿಸಿಕೊಳ್ಳುತ್ತವೆ ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ ಅಧಿಕೃತ ಹೇಳಿಕೆಯನ್ನು ಸೇನೆಯ ಪೂರ್ವ ಕಮಾಂಡ್ ಇಂದು ಸಂಜೆ ಬಿಡುಗಡೆ ಮಾಡುವ ನಿರೀಕ್ಷೆ ಇದೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿ ತಿಳಿಸಿದೆ.
ಈ ಹಿಂದೆ 2017ರ ಆಗಸ್ಟ್ನಲ್ಲಿ ಲಡಾಕ್ನ ಪೇಂಗಾಂಗ್ ಸರೋವರ ಪ್ರದೇಶದ ಬಳಿ ಇಂತಹದ್ದೇ ಮುಖಾಮುಖಿ ಘರ್ಷಣೆ ಸಂಭವಿಸಿತ್ತು.