ಬೆಂಗಳೂರು, ಮೇ 10 (DaijiworldNews/PY) : ಕೊರೊನಾ ಪೂರ್ವ ಮತ್ತು ನಂತರದ ದಿನಗಳಿಗೆ ನಮ್ಮ ಜೀವನಶೈಲಿ ಹೊಂದಿಕೊಳ್ಳುವಂತೆ ಬದಲಾಯಿಸಿಕೊಳ್ಳಬೇಕು. ಕೊರೊನಾ ವಿರುದ್ಧದ ಹೋರಾಟದಲ್ಲಿ ಕೊನೆಯ ಗೆಲುವು ಮನುಕುಲದ್ದು ಆಗಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.
ರಾಜಾಜಿನಗರದ ಭಾಷ್ಯಂ ವೃತ್ತದಲ್ಲಿ ಕೊರೊನಾ ಕರ್ತವ್ಯದಲ್ಲಿ ತೊಡಗಿಸಿರುವ ಆಶಾ ಕಾರ್ಯಕರ್ತೆಯರು, ಆರೋಗ್ಯ, ಪೊಲೀಸ್ ಸಿಬ್ಬಂದಿ ಮತ್ತು ಪೌರ ಕಾರ್ಮಿಕರನ್ನು ಪುಷ್ಪಾರ್ಚನೆ ಮೂಲಕ ಭಾನುವಾರ ಗೌರವಿಸಿ ಮಾತನಾಡಿದ ಅವರು, ಪ್ರತಿ ವ್ಯಕ್ತಿಯೂ ಕೊರೊನಾ ಒಡ್ಡುತ್ತಿರುವ ಬಹುಮುಖಿ ಸವಾಲುಗಳನ್ನು ಎದುರಿಸಲು ತಮ್ಮ ಆಚಾರ ವಿಚಾರಗಳಲ್ಲಿ ಸಕಾರಾತ್ಮಕವಾದ ಬದಲಾವಣೆ ತಂದುಕೊಳ್ಳಬೇಕು. ವೈಯುಕ್ತಿಕ ಹಾಗೂ ಸಾಮಾಜಿಕ ಸ್ವಚ್ಛತೆಯಷ್ಟೇ ಸಾಮಾಜಿಕ ಸ್ವಾಸ್ಥ್ಯ ಕೂಡಾ ಪ್ರಮುಖವಾದುದು ಎನ್ನುವುದನ್ನು ಎಲ್ಲರೂ ನೆನಪಿಟ್ಟಿಕೊಳ್ಳಬೇಕು ಎಂದರು.
ಕೊರೊನಾ ಪೂರ್ವ ಹಾಗೂ ಕೊರೊನಾ ನಂತರದ ದಿನಗಳಲ್ಲಿ ನಮ್ಮ ಜೀವನಶೈಲಿಯನ್ನು ಹೊಂದಿಕೊಳ್ಳುವಂತೆ ಬದಲಾವಣೆ ಮಾಡಿಕೊಳ್ಳಬೇಕು. ಕೊರೊನಾ ವಿರುದ್ದ ನಡೆಸುತ್ತಿರುವ ಹೋರಾಟದಲ್ಲಿ ಕೊನೆಯದಾಗಿ ಜಯ ಮನುಕುಲದ್ದಾಗಬೇಕು. ಮೂರನೇ ಮಹಾಯುದ್ದವನ್ನು ಇಡೀ ವಿಶ್ವ ಕೊರೊನಾ ವಿರುದ್ದ ಎದುರಿಸುತ್ತಿದೆ. ನಮ್ಮ ನಡೆ-ನುಡಿಗಳಿಂದ ನಮ್ಮೆಲ್ಲರ ಬದುಕನ್ನು ಕಾಪಾಡುವ ಕೊರೊನಾ ವಾರಿರ್ಸ್ ಗಳನ್ನು ಗೌರವಿಸಲು ಕಲಿತರಷ್ಟೆ ಈ ಮಹಾ ವಿಶ್ವ ಯುದ್ದವನ್ನು ನಾವು ಗೆಲ್ಲಬಲ್ಲೆವು ಎಂದು ತಿಳಿಸಿದರು.
ರಾಜ್ಯದಲ್ಲಿ ಕೊರೊನಾ ನಿಯಂತ್ರಣದಲ್ಲಿರಲು ಹಗಲಿರುಳು ಜನರ ಸೇವೆ ಮಾಡುತ್ತಿರುವ ಕೊರೊನಾ ವಾರಿಯರ್ಸ್ ಗಳೇ ನೀರ ಕಾರಣ ಎಂದರು. ಬಳಿಕ ಸುಮಾರು 200ಕ್ಕೂ ಹೆಚ್ಚು ವೈದ್ಯರು, ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಪೊಲೀಸರು, ಪೌರ ಕಾರ್ಮಿಕರು ಸೇರಿದಂತೆ ಕೊರೊನಾ ವಾರಿಯರ್ಸ್ಗಳನ್ನು ಗೌರವಿಸಲಾಯಿತು.