ನವದೆಹಲಿ, ಮೇ 10 (Daijiworld News/MB) : ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ದೇಶದಾದ್ಯಂತ ಪ್ರಸ್ತುತ ಜಾರಿಯಲ್ಲಿರುವ ಲಾಕ್ಡೌನ್ ಕುರಿತಾಗಿ ಚರ್ಚೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ರಾಜ್ಯ ಮುಖ್ಯಮಂತ್ರಿಗಳೊಂದಿಗೆ ಮತ್ತೊಂದು ವಿಡಿಯೊ ಕಾನ್ಫರೆನ್ಸ್ ನಡೆಸಲಿದ್ದಾರೆ.
ನಾಳೆ ಮಧ್ಯಾಹ್ನ ಮೂರು ಗಂಟೆಗೆ ಪ್ರಧಾನಿ ಮೋದಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಲಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯ ಸ್ಪಷ್ಟಪಡಿಸಿದೆ.
ಪ್ರಸ್ತುತ ಚಾಲ್ತಿಯಲ್ಲಿರುವ ಮೂರನೇ ಹಂತದ ಲಾಕ್ಡೌನ್ ಮೇ 17 ರ ತನಕ ಇರಲಿದ್ದು ಕೆಲವೊಂದು ಸಡಿಲಿಕೆಯನ್ನು ಮಾಡಲಾಗಿದೆ. ಇನ್ನು ಮುಂದೆ ಲಾಕ್ಡೌನ್ ಮುಂದುವರೆಸುವುದೋ ಅಥವಾ ಕಠಿಣಗೊಳಿಸುವುದೋ ಎಂಬ ನಿರ್ಧಾರ ಈ ಚರ್ಚೆಯ ಬಳಿಕ ಕೈಗೊಳ್ಳಲಾಗುತ್ತದೆ ಎಂದು ಹೇಳಲಾಗಿದೆ.
ಇನ್ನು ಇಂದು ಬೆಳಗ್ಗೆ ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬಾ ಅವರು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಆರೋಗ್ಯ ಕಾರ್ಯದರ್ಶಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ನಡೆಸಿದರು.