ನವದೆಹಲಿ, ಮೇ 10 (DaijiworldNews/PY) : ಕೈಲಾಸ ಮಾನಸ ಸರೋವರ ಯಾತ್ರೆಗೆ ಸಂಪರ್ಕ ಕಲ್ಪಿಸುವ ರಸ್ತೆಯು ಭಾರತದ ಗಡಿಯೊಳಗೇ ಇದೆ. ಈಗಾಗಲೇ ಚಾಲ್ತಿಯಲ್ಲಿದ್ದ ರಸ್ತೆಯನ್ನು ಸುಧಾರಿಸುತ್ತಿದ್ದೇವೆ ಅಷ್ಟೇ ಎಂದು ನೇಪಾಳಕ್ಕೆ ಭಾರತ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಉತ್ತರಾಖಂಡದ ಚೀನಾ ಗಡಿಯಲ್ಲಿ 17,000 ಅಡಿ ಎತ್ತರದಲ್ಲಿ ಲಿಪುಲೇಶ್ ಪಾಸ್ ಸಂಪರ್ಕಿಸುವಂತೆ ಭಾರತ ನಿರ್ಮಾಣ ಮಾಡುತ್ತಿರುವ ವಿಚಾರಕ್ಕೆ ನೇಪಾಳ ತಕರಾರು ವ್ಯಕ್ತಪಡಿಸಿದ್ದು, ಇದಕ್ಕೆ ಭಾರತ ತಕ್ಕ ಉತ್ತರ ನೀಡಿದೆ. ಭಾರತದ ಗಡಿಯೊಳಗೆ ಇರುವ ಕಾಮಗಾರಿ ಇದು. ಶಾಂತಿಯುತವಾಗಿ ವಿವಾದಗಳನ್ನು ಮಾತುಕತೆಯ ಮೂಲಕ ಪರಿಹಾರ ಮಾಡಿಕೊಳ್ಳೋಣ ಎಂದು ನೇಪಾಳಕ್ಕೆ ಭಾರತ ಸರ್ಕಾರ ಹೇಳಿದೆ.
ರಸ್ತೆ ಕಾಮಗರಿಗೆ ಸಂಬಂಧಿಸಿದಂತೆ ಭಾರತ ಸರ್ಕಾರ ಏಕಪಕ್ಷೀಯ ತೀರ್ಮಾನವು ಎರಡೂ ದೇಶಗಳ ಸಂಬಂಧದ ಮೇಲೆ ಪರಿಣಾಮ ಬೀರಿದ್ದು, ಗಡಿ ವಿವಾದವನ್ನು ಎರಡೂ ದೇಶಗಳೂ ಶಾಂತಿಯುತ ಮಾತುಕತೆಯಲ್ಲಿ ಪರಿಹರಿಸಿಕೊಳ್ಳಬೇಕು ಎನ್ನುವ ತೀರ್ಮಾನಕ್ಕೂ ಈ ವಿಚಾರ ಧಕ್ಕೆಯುಂಟು ಮಾಡಿದೆ ಎಂದು ನೇಪಾಳದ ವಿದೇಶಾಂಗ ಸಚಿವಾಲಯ ಹೇಳಿತ್ತು.
ಈ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಭಾರತೀಯ ವಿದೇಶಾಂಗ ವ್ಯವಹಾರಗಳ ಇಲಾಖೆ, ಕೈಲಾಸ ಮಾನಸ ಸರೋವರ ಯಾತ್ರೆಗೆ ಸಂಪರ್ಕಿಸುವ ರಸ್ತೆಯು ಭಾರತದ ಗಡಿಯೊಳಕ್ಕೆ ಇದ್ದು, ಪ್ರಸ್ತುತ ಚಾಲ್ತಿಯಲ್ಲಿದ್ದ ರಸ್ತೆಯನ್ನು ಸುಧಾರಣೆ ಮಾಡುತ್ತಿದ್ದೇವೆ ಎಂದು ಸ್ಪಷ್ಟವಾಗಿ ತಿಳಿಸಿದೆ.
ಭಾರತ ಮತ್ತು ನೇಪಾಳಗಳು ಗಡಿ ವಿವಾದ ಪರಿಹರಿಹರಿಸಲು ಪೂರ್ವ ನಿರ್ಧಾರಿತ ವ್ಯವಸ್ಥೆ ಹೊಂದಿವೆ. ಈಗಲೂ ಗಡಿ ತೀರ್ಮಾನದ ಪ್ರಕ್ರಿಯೆ ಚಾಲ್ತಿಯಲ್ಲಿದೆ. ನಾವು ನೇಪಾಳದೊಂದಿಗೆ ಹೋದಿರುವ ಸೌಹಾರ್ದಯುತ ಸಂಬಂಧವನ್ನು ದೃಷ್ಠಿಯಲ್ಲಿರಿಸಿಕೊಂಡು ಗಡಿ ವಿವಾದವನ್ನು ಮಾತುಕತೆಯಲ್ಲೇ ಪರಿಹರಿಸಿಕೊಳ್ಳಬೇಕು ಎನ್ನುವುದಕ್ಕೆ ಭಾರತ ಬದ್ದವಾಗಿದೆ ಎಂದರು.
ಶುಕ್ರವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಉದ್ಘಾಟಿಸಿದ 80 ಕಿ.ಮೀ. ಉದ್ದದ ರಸ್ತೆಯು ಟಿಬೆಟ್ನಲ್ಲಿರುವ ಕೈಲಾಸ ಮತ್ತು ಮಾನಸ ಸರೋವರ ಯಾತ್ರೆ ಮಾಡುವವರಿಗೆ ಅನುಕೂಲ ಕಲ್ಪಿಸಲಿದೆ.