ಬೆಂಗಳೂರು, ಮೇ 10 (Daijiworld News/MB) : ರಾಜ್ಯದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿರುವ ವಲಸಿಗ ಕಾರ್ಮಿಕರು ಸ್ವಂತ ಊರುಗಳಿಗೆ ಹೋಗಲು ಪರದಾಡುತ್ತಿರುವ ದೃಶ್ಯವನ್ನು ನಿತ್ಯ ನೋಡುತ್ತಿದ್ದೇವೆ. ಅದೇ ರೀತಿ ಬೇರೆ ಬೇರೆ ರಾಜ್ಯಗಳಲ್ಲಿ ಕೆಲಸ ಮಾಡುತ್ತಿರುವ ಕರ್ನಾಟಕದ ಕಾರ್ಮಿಕರೂ ಇಲ್ಲಿಗೆ ಬರಲು ಕಷ್ಟಪಡುತ್ತಿದ್ದಾರೆ. ಸ್ವಂತ ಊರುಗಳನ್ನು ತಲುಪಲು ಸರ್ಕಾರ ಎಲ್ಲ ಕಾರ್ಮಿಕರಿಗೆ ಕೂಡಲೇ ವ್ಯವಸ್ಥೆ ಮಾಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರವೊಂದನ್ನು ಟ್ವೀಟ್ ಮಾಡಿರುವ ಅವರು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ಲಾಕ್ ಡೌನ್ ಜಾರಿಯಾದ ಬಳಿಕ ತಮ್ಮ ಊರುಗಳಿಗೆ ಹೋಗಲಾಗದೆ ಸಂಕಷ್ಟಕ್ಕೆ ಒಳಗಾಗಿದ್ದು, ಸರ್ಕಾರ ಅವರನ್ನು ಮಾನವೀಯವಾಗಿ ನಡೆಸಿಕೊಳ್ಳುತ್ತಿಲ್ಲ, ಊರುಗಳಿಗೆ ಹೋಗಲು ಆಗದೆ, ಅನ್ನ, ಆಹಾರ ಇಲ್ಲದೆ ಅವರು ಹೆಣಗಾಡುತ್ತಿದ್ದಾರೆ. ಊರುಗಳಿಗೆ ನಡೆದು ಹೋಗುವ ಮಾರ್ಗದಲ್ಲಿ ನಡೆದು ಸುಸ್ತಾಗಿ ರೈಲು ಹಳಿಗಳ ಮೇಲೆ ಮಲಗಿ ಕೆಲವು ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಕೆಲವಡೆ ಹಸಿವಿನಿಂದ ಸತ್ತಿರುವ ಉದಾಹರಣೆಗಳೂ ನಮ್ಮ ಕಣ್ಣ ಮುಂದಿದೆ ಎಂದು ಹೇಳಿದ್ದಾರೆ.
ಇಷ್ಟಾದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮನಸ್ಸು ಕರಗಿದಂತೆ ಕಾಣುತ್ತಿಲ್ಲ. ಕೂಡಲೇ ರಾಜ್ಯದಲ್ಲಿರುವ ಕಾರ್ಮಿಕರನ್ನು ಅವರ ಊರುಗಳಿಗೆ ಕಳುಹಿಸಿಕೊಡಲು ಹಾಗೂ ಹೊರ ರಾಜ್ಯಗಳಲ್ಲಿರುವವರನ್ನು ಇಲ್ಲಿಗೆ ಕರೆತರಲು ಸರ್ಕಾರ ರೈಲು ವ್ಯವಸ್ಥೆ ಮಾಡಬೇಕು. ಕಾರ್ಮಿಕರ ಪ್ರಯಾಣ ವೆಚ್ಚದಲ್ಲಿ ಶೇ. 85ರಷ್ಟನ್ನು ಭರಿಸುವುದಾಗಿ ಕೇಂದ್ರ ಸರ್ಕಾರ ಈಗಾಗಲೇ ಹೇಳಿದೆ. ಉಳಿದ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸುವ ಮೂಲಕ ಕಾರ್ಮಿಕರ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಬೇಕು. ಇದಕ್ಕಾಗಿ ಮಾಡುವ ವೆಚ್ಚ ಸರ್ಕಾರಕ್ಕೆ ಭಾರಿ ಹೊರೆಯಾಗುವುದಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಬೆಂಗಳೂರಿನಿಂದ ಹೋಗುವ ಕಾರ್ಮಿಕರಿಗೆ ಅಕ್ಕಪಕ್ಕದ ಜಿಲ್ಲೆಗಳ ರೈಲ್ವೆ ನಿಲ್ದಾಣಕ್ಕೆ ಹೋಗುವಂತೆ ಹೇಳಿದೆಯಾದರೂ ಅಲ್ಲಿಗೆ ಹೋಗಲು ಯಾವುದೇ ಸೌಕರ್ಯ ಇಲ್ಲದ ಕಾರಣ ಅವರಿಗೆ ಬಸ್ ವ್ಯವಸ್ಥೆ ಮಾಡಬೇಕು. ಕಾರ್ಮಿಕರು ಸುರಕ್ಷಿತವಾಗಿ ಊರು ತಲುಪುವವರೆಗೆ ಊಟದ ಸೌಲಭ್ಯವನ್ನೂ ಒದಗಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.
ರಾಜ್ಯದಿಂದ ಹೊರ ಹೋಗುವವರಿಗೆ ಮತ್ತು ಒಳಗೆ ಬರುವವರಿಗೆ ಕಡ್ಡಾಯವಾಗಿ ವೈದ್ಯಕೀಯ ತಪಾಸಣೆ ಮಾಡಿಸಬೇಕು.ಕಾರ್ಮಿಕರನ್ನು ಸೇವಾಸಿಂಧುಗೆ ಎನ್ ರೋಲ್ ಮಾಡಿಸಲು ಪಾಲಿಕೆಯ ವಾರ್ಡ್ ಕಚೇರಿ, ಪೊಲೀಸ್ ಠಾಣೆಗಳಲ್ಲಿ ಕೌಂಟರ್ ಗಳನ್ನು ತೆರೆಯಬೇಕು. ಯಾವ ರಾಜ್ಯಕ್ಕೆ ಹೋಗಬೇಕು ಎಂಬುದರ ಬಗ್ಗೆ ಮಾಹಿತಿ ಪಡೆದುಕೊಳ್ಳುವ ವ್ಯವಸ್ಥೆಯಾಗಬೇಕು ಎಂದು ಹೇಳಿದ್ದಾರೆ.
ಈ ಎಲ್ಲವನ್ನೂ ಸಾಧ್ಯವಾಗಿಸುವೆಡೆ ಉಸ್ತುವಾರಿ ಸಚಿವರು ಮಾರ್ಗಸೂಚಿಯನ್ನು ಸರ್ಕಾರ ಸಾರ್ವಜನಿಕವಾಗಿ ಪ್ರಕಟಿಸಬೇಕು. ಇನ್ನು ಮುಂದೆ ಒಬ್ಬ ಕಾರ್ಮಿಕರನೂ ಸಾವು, ನೋವಿಗೆ ತುತ್ತಾಗದಂತೆ ಸರ್ಕಾರ ನೋಡಿಕೊಳ್ಳಬೇಕು. ಬೆವರು, ರಕ್ತ ಹರಿಸಿ ನಾಡು ಕಟ್ಟಿರುವ ಕಾರ್ಮಿಕರ ವಿಚಾರದಲ್ಲಿ ಸರ್ಕಾರ ತನ್ನ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯ ಧೋರಣೆ ಬಿಡಬೇಕು ಪರಿಸ್ಥಿತಿಯನ್ನು ಎಚ್ಚರಿಕೆ ಹಾಗೂ ಮಾನವೀಯತೆಯಿಂದ ನಿಭಾಯಿಸಬೇಕೆಂದು ಸಿದ್ದರಾಮಯ್ಯ ಸರ್ಕಾರವನ್ನು ಪತ್ರ ಮೂಲಕ ಒತ್ತಾಯಿಸಿದ್ದಾರೆ.