ನವದೆಹಲಿ, ಮೇ 10 (Daijiworld News/MB) : ಕೊರೊನಾ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಮಹಾರಾಷ್ಟ್ರ, ಗುಜರಾತ್, ಉತ್ತರ ಪ್ರದೇಶ, ಅಸ್ಸಾಂ, ದೆಹಲಿ, ಕರ್ನಾಟಕ ಸೇರಿದಂತೆ 25ಕ್ಕಿಂತಲೂ ಹೆಚ್ಚು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹೊಗೆರಹಿತ ತಂಬಾಕು ಉತ್ಪನ್ನ ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಉಗುಳುವುದನ್ನು ನಿಷೇಧಿಸಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಮೂಲಗಳಿಂದ ತಿಳಿದು ಬಂದಿರುವುದಾಗಿ ವರದಿಯಾಗಿದೆ.
ಏಪ್ರಿಲ್ 1ರಂದು ಕೇಂದ್ರ ಸರ್ಕಾರ ಕೊರೊನಾವೈರಸ್ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಹೊಗೆರಹಿತ ತಂಬಾಕು ಉತ್ಪನ್ನಗಳನ್ನು ಉಗುಳುವುದನ್ನು ನಿಷೇಧಿಸಬೇಕು ಎಂದು ರಾಜ್ಯಗಳಿಗೆ ತಿಳಿಸಿತ್ತು. ಇದೀಗ 22 ರಾಜ್ಯಗಳು ಮತ್ತು 6 ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೊಗೆರಹಿತ ತಂಬಾಕು ಉತ್ಪನ್ನಗಳು ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಉಗುಳುವುದನ್ನು ನಿಷೇಧಿಸಲಾಗಿದೆ ಎಂದು ಸಚಿವಾಲಯದ ಅಧಿಕೃತ ಮೂಲಗಳು ತಿಳಿಸಿದೆ.
ಅಸ್ಸಾಂ, ಚಂಡೀಗಢ, ದೆಹಲಿ, ಜಾರ್ಖಂಡ್, ಹರ್ಯಾಣ, ಗುಜರಾತ್, ಕರ್ನಾಟಕ, ಮಧ್ಯಪ್ರದೇಶ, ಒಡಿಶಾ, ಉತ್ತರ ಪ್ರದೇಶ ಮೊದಲಾದ ರಾಜ್ಯಗಳಲ್ಲಿ ತಂಬಾಕು ತಿಂದು ಸಾರ್ವಜನಿಕ ಪ್ರದೇಶಗಳಲ್ಲಿ ಉಗುಳುವವರಿಗೆ ದಂಡ ವಿಧಿಸಲಾಗುತ್ತದೆ.
ಈ ನಡೆಯನ್ನು ಸ್ವಾಗತಿಸಿದ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಆ್ಯಂಡ್ ನ್ಯೂರೊಸಯನ್ಸ್ನ ಮನೋವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊಫೆಸರ್ ಪ್ರತಿಮಾ ಮೂರ್ತಿ ಅವರು, ಕೊರೊನಾ ಹರಡುವುದನ್ನು ತಡೆಯಲು ಧೂಮಪಾನ, ತಂಬಾಕು ಬಳಕೆ ನಿಲ್ಲಿಸಬೇಕು. ಇದರ ಬಳಕೆಯಿಂದಾಗಿ ರೋಗ ಪ್ರತಿರೋಧ ಶಕ್ತಿ ಕ್ಷೀಣಿಸುತ್ತದೆ. ಧೂಮಪಾನವು ಶ್ವಾಸಕೋಶದ ಚಟುವಟಿಕೆ ಕ್ಷೀಣಿಸುವಂತೆ ಮಾಡುತ್ತದೆ. ಅವರಿಗೆ ಕೊರೊನಾ ತಗುಲಿದ್ದಲ್ಲಿ ಜೀವಕ್ಕೆ ಅಪಾಯವಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.