ಬೆಂಗಳೂರು, ಮೇ 11 (Daijiworld News/MB) : ಕೊರೊನಾ ಲಾಕ್ಡೌನ್ ಪರಿಣಾಮ ಸ್ವದೇಶಕ್ಕೆ ಮರಳಲಾಗದೇ ವಿದೇಶದಲ್ಲೇ ಇದ್ದ ಭಾರತೀಯರನ್ನು ವಾಪಾಸ್ ಕರೆತರುವ ಕಾರ್ಯ ಬಿರುಸಿನಿಂದ ನಡೆಯುತ್ತಿದ್ದು ಸೋಮವಾರ ಬೆಳಿಗ್ಗೆ 4.45ಕ್ಕೆ ಲಂಡನ್ನಿಂದ ಏರ್ ಇಂಡಿಯಾ ವಿಮಾನ (ಎಐ 1803) ದ ಮೂಲಕ 343 ಕನ್ನಡಿಗರು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ಬಂದಿಳಿದರು.
ಲಂಡನ್ನಿಂದ ಬಂದ ಇವರೆಲ್ಲರ ಥರ್ಮಲ್ ಸ್ಕ್ಯಾನಿಂಗ್ ಸಹಿತ ಅಗತ್ಯ ಆರೋಗ್ಯ ತಪಾಸಣೆ ಮಾಡಿ, ನಗರದ ವಿವಿಧ ಹೋಟೆಲ್ ಮತ್ತು ರೆಸಾರ್ಟ್ಗಳಲ್ಲಿ ಕ್ವಾರಂಟೈನ್ ಮಾಡಲಾಗುತ್ತಿದೆ. 14 ದಿನ ಕ್ವಾರಂಟೈನ್ ಅವಧಿ ಮುಗಿದ ನಂತರ ಇವರು ತಮ್ಮ ಕುಟುಂಬ ಸೇರಿಕೊಳ್ಳಲಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಕಣ್ಗಾವಲನ್ನು ಹೆಚ್ಚಿಸಲಾಗಿದ್ದು ಪ್ರಯಾಣಿಕರು ನಿಲ್ದಾಣದಿಂದ ಹೊರಬರುವ ಪ್ರವೇಶ ದ್ವಾರದಿಂದ ಹಿಡಿದು, ಬಸ್ ನಿಲುಗಡೆ ಸ್ಥಳದವರೆಗೆ ಬ್ಯಾರಿಕೇಡ್ ಹಾಕಲಾಗಿದೆ. ಹಾಗೆಯೇ ಅವರನ್ನು 16 ಬಿಎಂಟಿಸಿ ಬಸ್ಗಳ ಮೂಲಕ ಒಂದು ಬಸ್ನಲ್ಲಿ 20 ಜನರಂತೆ ಕ್ವಾರಂಟೈನ್ ಸೆಂಟರ್ಗಳಿಗೆ ಕಳುಹಿಸಲಾಗುತ್ತಿದೆ. ಇವರ ಕ್ವಾರಂಟೈನ್ಗಾಗಿ 18 ಪಂಚತಾರಾ ಹೋಟೆಲ್, 26 ಸ್ಟಾರ್ ಹೋಟೆಲ್ ಹಾಗೂ 40 ಸಾಧಾರಣ ಹೋಟೆಲ್ಗಳ ಎಲ್ಲ ಕೊಠಡಿಗಳನ್ನು ಬಳಸಲಾಗುತ್ತದೆ. ಪಂಚತಾರಾ ಹೋಟೆಲ್ಗಳು ದಿನಕ್ಕೆ ಒಬ್ಬರಿಗೆ ₹3,000, ಇಬ್ಬರಿಗೆ ₹3,700 ಶುಲ್ಕ, ಉಳಿದ ಸ್ಟಾರ್ ಹೋಟೆಲ್ಗಳು ಒಬ್ಬರಿಗೆ, ಒಂದು ಕೋಣೆಗೆ ₹1,850, ಸಾಧಾರಣ ಹೋಟೆಲ್ಗಳು ₹900 ಬಾಡಿಗೆ ನಿಗದಿ ಮಾಡಿವೆ.
ಹಾಗೆಯೇ ಪ್ರಯಾಣಿಕರು ಬಂದಿಳಿದಂತೆ ಅವರ ಮಾಸ್ಕ್ಗಳನ್ನು ಬದಲಾವಣೆ ಮಾಡಲಾಗಿದ್ದು ಹೊಸ ಮಾಸ್ಕ್ ನೀಡಲಾಗುತ್ತಿದೆ. ಅಷ್ಟು ಮಾತ್ರವಲ್ಲದೇ ಆರೋಗ್ಯ ಸೇತುವ ಆಪ್ ಡೌನ್ಲೋಡ್ ಮಾಡಿಕೊಳ್ಳುವಂತೆ ತಿಳಿಸಿ ವಿದೇಶದಿಂದ ಬಂದ ಅವರಿಗೆ ಭಾರತದ ಸಿಮ್ ಕಾರ್ಡ್ಗಳನ್ನು ನೀಡಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.