ಮುಂಬೈ, ಮೇ 11(Daijiworld News/MSP): ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಅವಿರೋಧವಾಗಿ ಮಹಾರಾಷ್ಟ್ರ ವಿಧಾನಪರಿಷತ್ಗೆ ಆಯ್ಕೆಯಾಗುವುದು ಖಚಿತವಾಗಿದೆ. ತಮ್ಮ ಪಕ್ಷದ ಅಭ್ಯರ್ಥಿಯ ನಾಮಪತ್ರವನ್ನು ಹಿಂಪಡೆಯಲು ಕಾಂಗ್ರೆಸ್ ನಿರ್ಧರಿಸಿರುವುದರಿಂದ ಉದ್ಧವ್ ಠಾಕ್ರೆ ಅವರ ಚುನಾವಣೆಯ ಹಾದಿ ಸುಗಮವಾಗಿದೆ.
ಮಹಾರಾಷ್ಟ್ರದ ಮೇಲ್ಮನೆ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಚುನಾವಣೆಗೆ ನಿಗದಿಯಾಗುತ್ತಿದ್ದಂತೆ ಮಹಾ ವಿಕಾಸ್ ಅಘಾಡಿಯ ಮಿತ್ರ ಪಕ್ಷ ಕಾಂಗ್ರೆಸ್ ಅಭ್ಯರ್ಥಿಯನ್ನು ಚುನಾವಣಾ ಅಖಾಡಕ್ಕೆ ಇಳಿಸಲು ನಿರ್ಧರಿಸಿತ್ತು. ಆದರೆ ಇದಕ್ಕೆ ಶಿವಸೇನೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಪರಿಣಾಮ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಹಿಂಪಡೆಯುವ ಸೂಚನೆ ನೀಡಿದೆ.
ಸದ್ಯ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಸೇರಿದಂತೆ ಮೇಲ್ಮನೆ ಚುನಾವಣೆಗೆ 9 ಅಭ್ಯರ್ಥಿಗಳು ಕಣದಲ್ಲಿದ್ದು, ಉದ್ಧವ್ ಠಾಕ್ರೆ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಗಳಿವೆ. ಮಹಾರಾಷ್ಟ್ರ ವಿಕಾಸ್ ಅಘಾಡಿಯ ಭಾಗವಾಗಿರುವ ಶಿವಸೇನೆ, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ಪಕ್ಷ 5 ಸ್ಥಾನಗಳನ್ನು ಗಳಿಸಲಿದೆ. ಬಿಜೆಪಿ 4 ಸ್ಥಾನಗಳನ್ನು ಗಳಿಸಲಿದೆ.