ಬೆಂಗಳೂರು, ಮೇ 11 (Daijiworld News/MB) : ದೇಶದಾದ್ಯಂತ ಕೊರೊನಾ ಮಹಾಮಾರಿಯಿಂದಾಗಿ ಲಾಕ್ಡೌನ್ ಮಾಡಲಾಗಿದ್ದು ಆರ್ಥಿಕವಾಗಿ ಬಹಳ ನಷ್ಟ ಉಂಟಾಗಿದೆ. ರಾಜ್ಯಕ್ಕೂ ಕೂಡಾ ಅಪಾತ ಆರ್ಥಿಕ ನಷ್ಟ ಉಂಟಾಗಿದ್ದು ಬರೋಬ್ಬರಿ ರೂ.10,675 ಕೋಟಿ ನಷ್ಟ ಉಂಟಾಗಿದೆ ಎಂದು ತಿಳಿದು ಬಂದಿದೆ.
2020-2021ರ ಬಜೆಟ್ ಭಾಷಣದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಜಿಎಸ್ಟಿ ಸೇರಿದಂತೆ ರಾಜ್ಯದ ಸ್ವ ತೆರಿಗೆ ಆದಾಯಕ್ಕೆ 1,28,107 ಕೋಟಿ ರೂ.ಬರಲಿದೆ ಎಂದು ಲೆಕ್ಕಾಚಾರ ಮಾಡಿದ್ದರು. ಆದರೆ ಲಾಕ್'ಡೌನ್ ಪರಿಣಾಮ ಕಳೆದ ಏಪ್ರಿಲ್ ತಿಂಗಳಿನಲ್ಲಿ ಸಂಪೂರ್ಣವಾಗಿ ತೆರಿಗೆ, ಅಬಕಾರಿ, ಅಂಚೆ ಚೀಟಿ, ನೋಂದಾವಣಿ, ಸಾರಿಗೆ (ಮೋಟಾರು ವಾಹನ) ಗಳಿಂದ ಬರಬೇಕಿದ್ದ ಆದಾಯ ಸ್ಥಗಿತವಾಗಿದೆ.
ಏಪ್ರಿಲ್ ತಿಂಗಳಿನಲ್ಲಿ ವಾಣಿಜ್ಯ ತೆರಿಗೆ ರೂ.6,870.25 ಕೋಟಿ, ಅಬಕಾರಿ ರೂ.1,891.6, ಅಂಚೆ ಮತ್ತು ನೋಂದಾವಣಿ ರೂ.1,054 ಕೋಟಿ ಹಾಗೂ ಸಾರಿಗೆ ರೂ.592.91 ಕೋಟಿ ಸಂಗ್ರಹವಾಗಿಬೇಕಿತ್ತು. ನವೆಂಬರ್ 2019 ರವರೆಗೆ ಜಿಎಸ್ಟಿ ಪರಿಹಾರವನ್ನು ಸ್ವೀಕರಿಸಲಾಗಿದ್ದು, ಇನ್ನೂ ರೂ. 5,000 ಕೋಟಿ ಬಾಕಿಯಿದೆ ಎಂದು ಹಣಕಾಸು ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.
ಲಾಕ್ಡೌನ್ ಸಡಿಲಿಕೆಯಾದ ಪರಿಣಾಮದಿಂದಾಗಿ ಆರ್ಥಿಕ ಚಟುವಟಿಕೆಗಳು ಭಾಗಶಃ ಪುನರಾರಂಭವಾಗಿದ್ದು ಮದ್ಯ ಮಾರಾಟ ಕೂಡಾ ಆರಂಭವಾಗಿದೆ. ಇದರಿಂದಾಗಿ ಆದಾಯ ಸಂಗ್ರಹ ಪ್ರಾರಂಭವಾಗಿದೆ.
ಈ ಕುರಿತು ಮಾಹಿತಿ ನೀಡಿರುವ ವಿತ್ತ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಜಿಎಸ್ಟಿ ಹಾಗೂ ಕೈಗಾರಿಕಾ ಚಟುವಟಿಕೆಗಳು ರಾಜ್ಯಕ್ಕೆ ದೊಡ್ಡ ಮಟ್ಟದಲ್ಲಿ ಆದಾಯ ತರುತ್ತದೆ. ಲಾಕ್ಡೌನ್ನಿಂದಾಗಿ ಎಲ್ಲಾ ಕಾರ್ಯಗಳು ಸ್ಥಗಿತವಾಗಿತ್ತು. ಇದೀಗ ಭಾಗಶಃ ಆರ್ಥಿಕ ಚಟುವಟಿಕೆಗಳು ಆರಂಭವಾಗಿದ್ದರೂ ಕೂಡಲೇ ಆದಾಯವನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಆದಾಯ ಸಂಗ್ರಹಕ್ಕೆ ಬಹಳಷ್ಟು ಕಾಲ ಬೇಕಾಗುತ್ತದೆ ಎಂದು ತಿಳಿಸಿದ್ದಾರೆ.