ಲಖನೌ, ಮೇ 11 (Daijiworld News/MB) : ಕೊರೊನಾ ಲಾಕ್ಡೌನ್ ಕಾರಣದಿಂದಾಗಿ ತನ್ನ ತವರಿಗೆ ತೆರಳಲಾಗದೆ ಸೈಕಲ್ ಮೂಲಕ ಊರಿಗೆ ವಾಪಾಸ್ ಆಗುತ್ತಿದ್ದ ಕಾರ್ಮಿಕ ತಿಂಡಿ ತಿನ್ನಲೆಂದು ಕುಳಿತ್ತಿದ್ದ ಸಂದರ್ಭದಲ್ಲಿ ಕಾರು ಢಿಕ್ಕಿ ಹೊಡೆದು ಮೃತಪಟ್ಟ ದಾರುಣ ಘಟನೆ ಉತ್ತರ ಪ್ರದೇಶದ ಲಖನೌನಲ್ಲಿ ನಡೆದಿದೆ.
ಮೃತ ಕಾರ್ಮಿಕನನ್ನು ಸಘೀರ್ ಅನ್ಸಾರಿ (26 ವರ್ಷ) ಎಂದು ಗುರುತಿಸಲಾಗಿದೆ. ವಿವಾಹಿತನಾಗಿರುವ ಅನ್ಸಾರಿಗೆ ಮೂವರು ಮಕ್ಕಳಿದ್ದಾರೆ.
ಲಾಕ್ಡೌನ್ ಕಾರಣದಿಂದಾಗಿ ಹಲವು ವಲಸೆ ಕಾರ್ಮಿಕರು ತಮ್ಮ ಊರಿಗೆ ಕಾಲ್ನಡಿಗೆ ಮೂಲಕ, ಸೈಕಲ್ ಮೂಲಕ ತಮ್ಮ ಗ್ರಾಮಗಳಿಗೆ ವಾಪಾಸ್ ಆಗುತ್ತಿದ್ದಾರೆ. ಇದೇ ರೀತಿಯಾಗಿ ಈ ಕಾರ್ಮಿಕನು ತನ್ನ 7 ಮಂದಿ ಸ್ನೇಹಿತರೊಂದಿಗೆ ಸೈಕಲ್ ಮೂಲಕ ಹೊರಟಿದ್ದು ದಾರಿ ಮಧ್ಯೆ ತಿಂಡಿಗೆಂದು ಕುಳಿತಾಗ ಕಾರು ಢಿಕ್ಕಿಯಾಗಿ ಸಾವನ್ನಪ್ಪಿದ್ದಾನೆ.
ದೆಹಲಿಯಿಂದ ಮೇ 5 ರಂದು ಈ 7 ಜನ ಕಾರ್ಮಿಕರು ತಮ್ಮ ಊರಿಗೆ ಸೈಕಲ್ ಮೂಲಕ ಹೊರಟಿದ್ದು ಐದು ದಿನಗಳಲ್ಲಿ 1,000 ಕಿಲೋ ಮೀಟರ್ ದೂರ ಸೈಕಲ್ ಮೂಲಕ ಬಂದು ಲಖನೌ ತಲುಪಿದ್ದಾರೆ. ಶನಿವಾರ ಬೆಳಗ್ಗೆ ಎಲ್ಲರೂ ತಿಂಡಿ ತಿನ್ನಲೆಂದು ಸೈಕಲ್ ನಿಲ್ಲಿಸಿ ಡಿವೈಡರ್ ಮೇಲೆ ಕುಳಿತ್ತಿದ್ದು ಈ ವೇಳೆ ನಿಯಂತ್ರಣ ತಪ್ಪಿದ ಕಾರು ವೇಗವಾಗಿ ಬಂದು ಮೊದಲಿಗೆ ಡಿವೈಡರ್ಗೆ ಢಿಕ್ಕಿ ಹೊಡೆದಿದ್ದು ಬಳಿಕ ಅನ್ಸಾರಿಗೆ ಢಿಕ್ಕಿಯಾಗಿದೆ.
ಆ ಕೂಡಲೇ ಕಾರು ಚಾಲಕ ಕಾರಿನಿಂದ ಇಳಿದು ಅನ್ಸಾರಿ ಸ್ನೇಹಿತರಿಗೆ ಹಣ ನೀಡಲು ಮುಂದಾಗಿದ್ದು ಸ್ನೇಹಿತರು ಹಣವನ್ನು ನಿರಾಕರಿಸಿದ್ದಾರೆ. ಕೂಡಲೇ ಅನ್ಸಾರಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಕಾರ್ಮಿಕ ಸಾವನ್ನಪ್ಪಿದ್ದಾನೆ.
ಚಾಲಕನ ಅಜಾಗರೂಕತೆಯಿಂದ ಈ ಅಪಘಾತ ಸಂಭವಿಸಿರುವುದಾಗಿ ಪೊಲೀಸರು ಚಾಲಕನ ವಿರುದ್ಧ ದೂರು ದಾಖಲಿಸಿದ್ದಾರೆ.