ನವದೆಹಲಿ, ಮೇ 11 (Daijiworld News/MB) : ಕೊರೊನಾ ಲಾಕ್ಡೌನ್ನಿಂದಾಗಿ ತಮ್ಮ ತಮ್ಮ ಊರುಗಳಿಗೆ ಮರಳಲಾಗದೆ ಜನರು ಸಂಕಷ್ಟದಲ್ಲಿದ್ದಾರೆ. ವಿದೇಶದಲ್ಲಿರುವ ಭಾರತೀಯರನ್ನು ಸ್ವದೇಶಕ್ಕೆ ವಾಪಾಸ್ ಕರೆದು ಕೊಂಡು ಬರುವ ಕಾರ್ಯಗಳು ನಡೆಯುತ್ತಿದೆ. ಈ ನಡುವೆ ಜರ್ಮನ್ ಪ್ರಜೆಯೋರ್ವ ಕಳೆದ 54 ದಿನಗಳಿಂದ ದೆಹಲಿಯ ಇಂದಿರಾಗಾಂಧಿ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ವಾಸ ಮಾಡುವಂತಾಗಿದೆ.
40 ವರ್ಷ ವಯಸ್ಸಿನ ಎಡ್ಗರ್ಡ್ ಝೀಬತ್ ವಿಯೇಟ್ನಾಂನಿಂದ ವೀಟ್ಜೆಟ್ ಏರ್ ವಿಮಾನದ ಮೂಲಕ ಮಾರ್ಚ್ 18 ರಂದು ಆಗಮಿಸಿದ್ದು ಇಲ್ಲಿಂದ ಇಸ್ತಾಂಬುಲ್ಗೆ ದೆಹಲಿಯಲ್ಲಿ ಬೇರೆ ವಿಮಾನ ಏರಬೇಕಿತ್ತು. ಆದರೆ ಕೊರೊನಾ ಕಾರಣ ತಾನು ಹೋಗುವ ಸ್ಥಳಕ್ಕೆ ಭಾರತದಿಂದ ಎಲ್ಲಾ ವಿಮಾನಗಳನ್ನು ನಿರಾಕರಿಸಲಾಗಿದೆ ಎಂದು ಝೀಬತ್ಗೆ ತಾನು ಇಲ್ಲಿ ಬಂದ ಬಳಿಕವೇ ತಿಳಿದು ಬಂದಿದೆ ಎನ್ನಲಾಗಿದೆ.
ಕೊರೊನಾ ಕಾರಣದಿಂದಾಗಿ ಅಂದು ಭಾರತದಿಂದ ಟರ್ಕಿಗೆ ಹೋಗುವ ಹಾಗೂ ಟರ್ಕಿಯಿಂದ ಭಾರತಕ್ಕೆ ಬರುವ ಎಲ್ಲಾ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ. ಇದಾದ ನಾಲ್ಕು ದಿನಗಳ ಬಳಿಕ ಭಾರತ ಎಲ್ಲಾ ಅಂತರ್ ರಾಷ್ಟ್ರೀಯ ವಿಮಾನಗಳನ್ನೂ ರದ್ದುಗೊಳಿಸಿದೆ. ಬಳಿಕ ಮಾರ್ಚ್ 25 ರಂದು ಕೊರೊನಾ ನಿಯಂತ್ರಣದ ಭಾಗವಾಗಿ ದೇಶದಾದ್ಯಂತ ಲಾಕ್ಡೌನ್ ಮಾಡಲಾಗಿದ್ದು ಇದು ಮೇ 17 ರವರೆಗೂ ಮುಂದುವರೆಸಲಾಗಿದೆ. ಈ ಕಾರಣದಿಂದಾಗಿ ತನ್ನ ದೇಶಕ್ಕೆ ಮರಳಲಾಗದೆ ಜರ್ಮನ್ ಪ್ರಜೆ ವಿಮಾನ ನಿಲ್ದಾಣದಲ್ಲೇ ವಾಸವಾಗುವಂತಾಗಿದೆ.
ವಿಮಾನ ನಿಲ್ದಾಣದಲ್ಲಿ ಈತನೊಂದಿಗೆ ಶ್ರೀಲಂಕಾ, ಮಾಲ್ಡೀವ್ಸ್ ಹಾಗೂ ಫಿಲಿಫೀನ್ಸ್ನ ತಲಾ ಒಬ್ಬರು ನಾಗರಿಕರಿದ್ದರು. ಇವರಿಗೆ ಆಯಾ ದೇಶದ ರಾಯಭಾರ ಕಚೇರಿ ಕ್ವಾರಂಟೈನ್ ವ್ಯವಸ್ಥೆ ಮಾಡಿದೆ. ಆದರೆ ಈತ ತನ್ನ ದೇಶದಲ್ಲಿ ಅಪರಾಧ ದಾಖಲೆ ಹೊಂದಿದ್ದು ಈತನನ್ನು ವಾಪಾಸ್ ಕರೆಸಿಕೊಳ್ಳಲು ಜರ್ಮನಿ ಒಪ್ಪುತ್ತಿಲ್ಲ. ಈತನ ಅಪರಾಧ ಕಾರಣದಿಂದಾಗಿ ಭಾರತ ಕೂಡಾ ವೀಸಾ ನೀಡಲು ನಿರಾಕರಿಸಿದೆ.
ಜರ್ಮನ್ ರಾಯಭಾರ ಕಚೇರಿ ಈ ಕುರಿತಾಗಿ ಇಮಿಗ್ರೇಶನ್ ಬ್ಯೂರೊಗೆ ಮಾಹಿತಿ ನೀಡಿ ಈತ ಕುಖ್ಯಾತ ಅಪರಾಧಿ, ಆದರೆ ಈತ ವಿದೇಶಿ ನೆಲದಲ್ಲಿ ಇರುವ ಕಾರಣ ಕಸ್ಟಡಿಗೆ ಪಡೆಯುವಂತಿಲ್ಲ ಎಂದು ತಿಳಿಸಿದೆ. ಈ ಕುರಿತಾಗಿ ದೆಹಲಿ ಪೊಲೀಸರಿಗೂ ಮಾಹಿತಿ ನೀಡಿದೆ.
ವಾಸ್ತವವಾಗಿ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಟ್ರಾನ್ಸಿಸ್ಟ್ ಏರಿಯಾದಲ್ಲಿ ಅಂತರ್ ರಾಷ್ಟ್ರೀಯ ಪ್ರಯಾಣಿಕರು ಒಂದು ದಿನ ಮಾತ್ರ ಉಳಿದು ಕೊಳ್ಳುವ ಅವಕಾಶವಿದೆ. ಆದರೆ ಈತ ಅಕ್ರಮ ಹಾಗೂ ಅತಂತ್ರವಾಗಿ ವಿಮಾನ ನಿಲ್ದಾಣದಲ್ಲೇ ಉಳಿಯುವಂತಾಗಿದೆ.
ಇನ್ನು ಝೀಬತ್ ಭಾರತೀಯ ವೀಸಾಗೆ ಅರ್ಜಿಯನ್ನೂ ಸಲ್ಲಿಸಿಲ್ಲ ಎಂದು ಹೇಳಲಾಗಿದೆ.