ಬೆಂಗಳೂರು, ಮೇ 11(Daijiworld News/MSP): ಕೊರೊನಾ ವೈರಸ್ ನಿಯಂತ್ರಣ, ಲಾಕ್ ಡೌನ್ ಕುರಿತಂತೆ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿವಿಧ ರಾಜ್ಯಗಳ ಸಿಎಂಗಳ ಜೊತೆ ಚರ್ಚೆ ನಡೆಸಲಿದ್ದು, ರಾಜ್ಯದ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಕರ್ನಾಟಕಕ್ಕೆ 'ಕೋವಿಡ್ ಪ್ಯಾಕೇಜ್' ಜೊತೆಗೆ ಜಿಎಸ್ಟಿ ಬಾಕಿ, ನೆರೆ-ಬರ ಪರಿಹಾರ ನೀಡುವಂತೆ ಮೋದಿ ಅವರನ್ನು ಆಗ್ರಹಿಸಬೇಕು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಸಂಕಷ್ಟದ ಸಮಯದಲ್ಲಿ ಕೇಂದ್ರದಿಂದ ಸೂಕ್ತ ಆರ್ಥಿಕ ನೆರವಿನ ಹಸ್ತ ಬಾರದೆ ಇದ್ದರೆ ಕೋವಿಡ್ ನಿಯಂತ್ರಣ ಮತ್ತಷ್ಟು ಕಠಿಣವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕಳೆದ 3 ದಿನಗಳ ಅಂಕಿಅಂಶ ಗಮನಿಸಿದರೆ ರಾಜ್ಯದಲ್ಲಿ ಕೋವಿಡ್ ಹೆಚ್ಚುತ್ತಿರುವಂತೆ ಕಾಣುತ್ತಿದೆ. ಹೀಗಾಗಿ ವೈದ್ಯಕೀಯ ಕ್ರಮಗಳನ್ನು ಬಿಗಿಗೊಳಿಸಬೇಕಿದೆ. ಜೊತೆಗೆ ನಷ್ಟಕ್ಕೊಳಗಾಗಿರುವ ಜನರಿಗೆ ಆರ್ಥಿಕ ಪರಿಹಾರ ನೀಡಬೇಕಿದೆ. ದೊಡ್ಡ ಮಟ್ಟದ ತೆರಿಗೆ ಸಂಗ್ರಹಿಸಿ ಕೇಂದ್ರಕ್ಕೆ ಕೊಡುವ ಕರ್ನಾಟಕದಂತಹ ದೊಡ್ಡ ರಾಜ್ಯಕ್ಕೆ ಸೂಕ್ತ ಪ್ಯಾಕೇಜ್ ಅತ್ಯಗತ್ಯ ಎಂದು ಹೇಳಿದ್ದಾರೆ.
ಕೊರೊನಾ ವಿರುದ್ಧದ ಹೋರಾಟಕ್ಕಾಗಿ ಕೇಂದ್ರ ಸರ್ಕಾರ ಪಿಎಂ ಕೇರ್ ಫಂಡ್ ಸ್ಥಾಪಿಸಿದೆ. ಇದಕ್ಕೆ ಸಂಸದರಾದಿಯಾಗಿ, ಉದ್ಯಮಿಗಳು, ನಾಗರಿಕರು ಉದಾರ ದೇಣಿಗೆ ನೀಡಿದ್ದಾರೆ. ಹೀಗಿದ್ದೂ ಕೇಂದ್ರದಿಂದ ರಾಜ್ಯಕ್ಕೆ ಈ ವರೆಗೆ ಕೋವಿಡ್ ಎದುರಿಸಲು ಸೂಕ್ತ ಆರ್ಥಿಕ ನೆರವು ಬಂದಿಲ್ಲ ಎಂಬುದನ್ನು ಮೋದಿ ಅವರಿಗೆ ಬಿಎಸ್ವೈ ಮನನ ಮಾಡಿಕೊಡಬೇಕು. ಇದಲ್ಲದೆ ಜಿಎಸ್ ಟಿ, ನೆರೆ ಬರ ಪರಿಹಾರ ಸೇರಿದಂತೆ ಕೇಂದ್ರದಿಂದ ಬರಬೇಕಾದ ಇತರ ಬಾಕಿ ಹಣದ ಬಗ್ಗೆಯೂ ಇವತ್ತಿನ ಮೋದಿ ಅವರ ಸಭೆಯಲ್ಲಿ ಕೇಳಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.