ಬೆಂಗಳೂರು, ಮೇ 11 (DaijiworldNews/PY) : ಪಾದರಾಯನಪುರದಲ್ಲಿ ಕ್ವಾರಂಟೈನ್ನಲ್ಲಿರಬೇಕಾದ ಕೆಲ ಮಹಿಳೆಯರು ಹೊರ ಹೋದ ಬಗ್ಗೆ ತನಿಖೆಗೆ ಸೂಚಿಸಲಾಗಿದೆ. ಇವರ ಮೇಲೆ ನಿರ್ದಾಕ್ಷಿಣ್ಯ ಕ್ರಮಕ್ಕಾಗಿ ಸಿಎಂ ಯಡಿಯೂರಪ್ಪ ಅವರ ಜೊತೆ ಚರ್ಚೆ ನಡೆಸಲಾಗುವುದು ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, ಪಾದರಾಯನಪುರದಲ್ಲಿ ಕ್ವಾರಂಟೈನ್ನಲ್ಲಿರಬೇಕಾದ ಕೆಲ ಮಹಿಳೆಯರು ಹೊರ ಹೋದ ಬಗ್ಗೆ ತನಿಖೆಗೆ ಸೂಚಿಸಲಾಗಿದೆ. ನಾಡಿನ ಜನರ ಆರೋಗ್ಯದ ವಿಷಯದಲ್ಲಿ ಆಟವಾಡುವ ಇಂತಹ ಘಟನೆ ಸಹಿಸಲು ಅಸಾಧ್ಯ. ಇವರ ಮೇಲೆ ನಿರ್ದಾಕ್ಷಿಣ್ಯ ಕ್ರಮಕ್ಕಾಗಿ ಮಾನ್ಯ ಸಿಎಂ ಯಡಿಯೂರಪ್ಪ ಅವರೊಂದಿಗೆ ಚರ್ಚೆ ನಡೆಸಲಾಗುವುದು. ನಾಡಿನ ಜನತೆಯ ಆರೋಗ್ಯ ಕಾಪಾಡುವುದೇ ನಮ್ಮ ಮುಖ್ಯ ಧ್ಯೇಯ ಎಂದು ತಿಳಿಸಿದ್ದಾರೆ.
ಪಾದರಾಯನಪುರದಲ್ಲಿ ಲಾಕ್ಡೌನ್, ಸೀಲ್ಡೌನ್ ಇದ್ದರೂ ಮಹಿಳೆಯರು ಕ್ಯಾರೇ ಎನ್ನದೇ ಕೌಂಪೌಂಡ್ ಹಾರಿ ಹೊರ ಹೋಗಿದ್ದಾರೆ. ಇದರಿಂದಾಗಿ ಎಚ್ಚೆತ್ತುಕೊಂಡ ಬಿಬಿಎಂಪಿ ಅಧಿಕಾರಿಗಳು ಜನರ ಕಳ್ಳ ಮಾರ್ಗವನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ.
ಪಾದರಾಯನಪುರವನ್ನು ಸೀಲ್ಡೌನ್ ಮಾಡಲಾಗಿದ್ದು, ಆ ಪ್ರದೇಶದಲ್ಲಿ ಪೊಲೀಸರು ಬ್ಯಾರಿಕೇಡ್ಗಳನ್ನು ಹಾಕಿದ್ದಾರೆ. ಆದರೆ, ಮಹಿಳೆಯರು ಪೊಲೀಸರ ಮಾತಿಗೂ ಬೆಲೆ ಕೊಡದೇ ಹಾಕಲಾಗಿದ್ದ ಬ್ಯಾರಿಕೇಡ್ಗಳನ್ನು ದಾಟಲು ಪ್ರಯತ್ನಿಸಿದ್ದಾರೆ. ಈ ಸಂದರ್ಭ ಮಹಿಳೆಯರಿಗೆ ಹೋಗಲು ಪೊಲೀಸರು ಅವಕಾಶ ನೀಡದ ಕಾರಣ ಮಹಿಳೆಯರು ಏಳು ಅಡಿ ಕೌಂಪೌಂಡ್ ಹಾರಿದ್ದು, ಬಳಿಕ ರೈಲ್ವೇ ಹಳಿ ದಾಟಿ ವಿಜಯನಗರದತ್ತ ಹೋಗಿದ್ದಾರೆ.