ಬೆಂಗಳೂರು, ಮೇ 11 (Daijiworld News/MB) : ಜೆಪಿ ನಗರ 7ನೇ ಹಂತದ ಆರ್ಬಿಐ ಲೇಔಟ್ನಲ್ಲಿ ವೃದ್ಧ ದಂಪತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಆರೋಪಿಯನ್ನು ಘಟನೆ ನಡೆದ 24 ಗಂಟೆಯೊಳಗೆ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಆವಲಹಳ್ಳಿಯ ಡಿ. ರಾಕೇಶ್ ಆಲಿಯಾಸ್ ರಾಕ್ಸ್ (25) ಎಂದು ಗುರುತಿಸಲಾಗಿದೆ.
ಭಾನುವಾರ ರಾತ್ರಿ ಬಿ.ಜಿ. ಗೋವಿಂದಯ್ಯ (65) ಮತ್ತು ಶಾಂತಮ್ಮ (58) ಅವರ ಹತ್ಯೆ ಮಾಡಲಾಗಿದ್ದು ಈ ದಂಪತಿಯ ಪುತ್ರನೇ ಹತ್ಯೆ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ಆದರೆ ಪುತ್ರ ನವೀನ್ ತನ್ನ ಪತ್ನಿಯ ತಮ್ಮ ರಾಕೇಶ್ ವಿರುದ್ಧವಾಗಿ ದೂರು ನೀಡಿದ್ದು ತನಿಖೆ ನಡೆಸಿದ ಪೊಲೀಸರು ಆರೋಪಿ ಆತನೇ ಎಂದು ಖಚಿತಪಡಿಸಿ ಬಂಧನ ಮಾಡಿದ್ದಾರೆ.
ಈ ದಂಪತಿಯ ಪುತ್ರ ನವೀನ್ ತಾನು ನೀಡಿದ ದೂರಿನಲ್ಲಿ, 2008 ರಲ್ಲಿ ಪವಿತ್ರಾ ಎಂಬಾಕೆಯನ್ನು ನಾನು ವಿವಾಹವಾಗಿದ್ದು ಹೊಂದಾಣಿಕೆ ಆಗದ ಹಿನ್ನಲೆಯಿಂದ ಆಕೆ ನನ್ನನ್ನು ಬಿಟ್ಟು ದೂರವಿದ್ದಾರೆ. ಬಳಿಕ ಕೌಟುಂಬಿಕ ನ್ಯಾಯಾಲಯದಲ್ಲಿ ಆಪ್ತ ಸಮಾಲೋಚನೆ ನಡೆಸಿದ್ದು ಆಕೆ ಮರಳಿ ಮನೆಗೆ ಬಂದಿದ್ದಳು. ಆದರೆ ಆ ಬಳಿಕ ಪತ್ನಿಯ ತಮ್ಮ ರಾಕೇಶ್ ನನ್ನ ಮತ್ತು ನನ್ನ ಕುಟುಂಬದ ಮೇಲೆ ದ್ವೇಷ ಹೊಂದಿದ್ದ ಎಂದು ಆರೋಪಿಸಿದ್ದರು.
ಹಾಗೆಯೇ, ನಾನು ನನ್ನ ಪತ್ನಿಯನ್ನು ಭಾನುವಾರ ಮನೆಗೆ ಕರೆದುಕೊಂಡು ಬರಲು ಆತನಿಗೆ ಕರೆ ಮಾಡಿ ಹೇಳಿದೆ. ಆ ಸಂದರ್ಭದಲ್ಲಿ ನಮ್ಮ ನಡುವೆ ಮಾತುಕತೆ ನಡೆದಿದ್ದು "ನಿಮ್ಮ ಮನೆಗೆ ನಾನೀಗ ಬಂದು ಏನು ಮಾಡುತ್ತೇನೆ ನೋಡಿ" ಎಂದು ನನಗೆ ಮತ್ತು ತಂದೆ ಗೋವಿಂದಯ್ಯ ಅವರನ್ನು ಬೆದರಿಸಿದ್ದ. ಸಂಜೆ 7.30ರ ಸುಮಾರಿಗೆ ಮನೆಯಿಂದ ಹೊರ ಹೋಗಿದ್ದೆ. ರಾಕೇಶ್ ರಾತ್ರಿ 7.30ರಿಂದ 8.45ರ ಮಧ್ಯೆ ಮನೆಗೆ ಬಂದು ತಂದೆ ಹಾಗೂ ತಾಯಿಯನ್ನು ಇರಿದು ಹತ್ಯೆ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾನೆ.
ಈ ಮೊದಲು, ಮದ್ಯದ ಅಮಲಿನಲ್ಲಿದ್ದ ಮಗನೇ ತಂದೆ ತಾಯಿಯ ಹತ್ಯೆ ಮಾಡಿರಬಹುದು ಎಂದು ಶಂಕಿಸಲಾಗಿತ್ತು.
ಈ ಕುರಿತು ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.