ಶ್ರೀನಗರ, ಮೇ 11 (Daijiworld News/MB) : ಹಿಜ್ಬುಲ್ ಉಗ್ರ ಸಂಘಟನೆಯ ಕಮಾಂಡರ್ ರಿಯಾಜ್ ನೈಕೂ ಹತ್ಯೆ ಬೆನ್ನಲ್ಲೇ ಸಂಘಟನೆಯ ಕಾಶ್ಮೀರ ಘಟಕಕ್ಕೆ ನೂತನ ಕಮಾಂಡರ್ ಆಗಿ ಉಗ್ರ ಗಾಝಿ ಹೈದರ್ ಅವರನ್ನು ಆಯ್ಕೆ ಮಾಡಲಾಗಿದೆ.
ಈ ಕುರಿತಾಗಿ ಹಿಜ್ಬುಲ್ ಉಗ್ರ ಸಂಘಟನೆ ಹೇಳಿಕೆ ಬಿಡುಗಡೆ ಮಾಡಿದ್ದು, ಕಾಶ್ಮೀರ ವಿಭಾಗದ ಕಮಾಂಡರ್ ಆಗಿ ಗಾಝಿ ಹೈದರ್ನನ್ನು ಆಯ್ಕೆ ಮಾಡಲಾಗಿದೆ. ಝಫರ್ ಉಲ್ ಇಸ್ಲಾಂನನ್ನು ಉಪಮುಖ್ಯಸ್ಥನಾಗಿ, ಅಬು ತಾರಿಖ್ ನನ್ನು ಉಗ್ರ ಸಂಘಟನೆಯ ಸಲಹೆಗಾರನಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದೆ.
ಇನ್ನು ಗಾಝಿ ಹೈದರ್ನ್ನು ಪಿಒಕೆಯಲ್ಲಿರುವ ಹಿಜ್ಬುಲ್ ಉಗ್ರ ಸಂಘಟನೆಯ ಮುಖ್ಯಸ್ಥ ಸೈಯದ್ ಸಲಾಹ್ ಉದ್ ದೀನ್ ಆಯ್ಕೆ ಮಾಡಿದ್ದಾನೆ ಎಂದು ಹೇಳಲಾಗಿದೆ.
ಹಿಜ್ಬುಲ್ ಉಗ್ರ ಸಂಘಟನೆಯ ಕಮಾಂಡರ್ ರಿಯಾಜ್ ನೈಕೂನನ್ನು ಕಳೆದ ಬುಧವಾರ ಸೇನಾ ಪಡೆ ಕಾರ್ಯಾಚರಣೆಯಲ್ಲಿ ಹತ್ಯೆಮಾಡಿದೆ. ಆತ ಮೊದಲು ಗಣಿತ ಶಿಕ್ಷಕನಾಗಿದ್ದು ಬಳಿಕ 2012ರಲ್ಲಿ ಉಗ್ರ ಸಂಘಟನೆಯನ್ನು ಸೇರಿದ್ದಾನೆ.