ಬೆಂಗಳೂರು, ಮೇ 11 (DaijiworldNews/PY) : ರಾಜ್ಯ ಮತ್ತು ಕೇಂದ್ರದ ನಾನಾ ಯೋಜನೆ ಅಡಿ ನೀಡುತ್ತಿರುವ ಪಡಿತರವನ್ನು ಮಾರಾಟ ಮಾಡಲು ಮುಂದಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ನಿಶ್ಚಿತ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಗೋಪಾಲಯ್ಯ ಹೇಳಿದರು.
ಸೋಮವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ನೀಡುತ್ತಿರುವ ಅಕ್ಕಿಯನ್ನು ಕೆ.ಜಿಗೆ ₹12ರಿಂದ ₹15 ಕ್ಕೆ ಮಾರಾಟ ಮಾಡುತ್ತಿರುವ ವಿಚಾರ ಗಮನಕ್ಕೆ ಬಂದಿದೆ. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ನಾವು ಬಡವರಿಗೆ ಪಡಿತರ ನೀಡುತ್ತಿದ್ದೇವೆ. ಇದನ್ನು ದುರ್ಬಳಕೆ ಮಾಡುತ್ತಿರುವುದು ಸರಿಯಲ್ಲ. ಇದಕ್ಕೆ ಸಂಬಂಧಪಟ್ಟ ಕಾನೂನನ್ನು ತರಲು ಅಧಿಕಾರಿಗಳೊಂದಿಗೆ ಹಾಗೂ ಸಿಎಂ ಅವರೊಂದಿಗೆ ಚರ್ಚೆ ಮಾಡುತ್ತೇನೆ ಎಂದಿ ತಿಳಿಸಿದರು.
ಈ ಯೋಜನೆಯನ್ನು ಸಾಕಷ್ಟು ಮಂದಿ ದುರ್ಬಳಕೆ ಮಾಡುತ್ತಿರುವುದರ ಬಗ್ಗೆ ದೂರುಗಳು ಬಂದಿವೆ. ಪಡಿತರ ಜನರಿಗೆ ಹೆಚ್ಚಾದಲ್ಲಿ ಅದನ್ನು ಅಂಗಡಿಯಲ್ಲೇ ಬಿಟ್ಟು ಬಿಡಿ. ಅದು ಬಡವರಿಗೆ ಅನುಕೂಲವಾಗುತ್ತದೆ. ಬದಲಾಗಿ ಯೋಜನೆಯನ್ನು ದುರ್ಬಳಕೆ ಮಾಡಿಕೊಳ್ಳುವುದು ಬೇಡ. ಪಡಿತರವನ್ನು ದುರ್ಬಳಕೆ ಮಾಡುವವರ ಪಡತರವನ್ನು ರದ್ದು ಮಾಡಲು ಕೂಡಾ ಕಾನೂನಿನಲ್ಲಿ ಅವಕಾಶ ಕಲ್ಪಿಸಲು ಚಿಂತನೆ ನಡೆದಿದೆ ಎಂದರು.
ಮೇಲ್ನೋಟಕ್ಕೆ ಪಡಿತರವನ್ನು ದುರ್ಬಳಕೆ ಮಾಡಿಕೊಂಡಿರುವಂತಹ 499 ಅಂಗಡಿಗಳಿಗೆ ನೊಟೀಸ್ ನೀಡಿದ್ದು, 33 ಲೈಸೆನ್ಸ್ಗಳನ್ನು ರದ್ದುಪಡಿಸಿದ್ದೇವೆ. ನಮ್ಮ ಅಧಿಕಾರಿಗಳು ಮೈಸೂರು, ಕಲಬುರ್ಗಿ ಹಾಗೂ ದಾವಣಗೆರೆಗಳ ಖಾಸಗಿ ಗೋದಾಮುಗಳ ಮೇಲೆ ದಾಳಿ ನಡೆಸಿದ್ದು, ಸಾವಿರಾರು ಕ್ವಿಂಟಲ್ ಅಕ್ಕಿ ವಶಕ್ಕೆ ಪಡೆದುಕೊಂಡಿದ್ದಾರೆ. ಇಷ್ಟು ಅಕ್ಕಿ ಎಲ್ಲಿಂದ ಬಂದಿದೆ ಎನ್ನು ಬಗ್ಗೆ ತನಿಖೆ ಮಾಡಿ ವರದಿ ಸಲ್ಲಿಸಲು ಆಯಾ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.
ತಪ್ಪು ಮಾಡಿದವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು. ತಪ್ಪಿತಸ್ಥರು ಎಷ್ಟೇ ಪ್ರಭಾವಿಯಾಗಿದ್ದರೂ ಅಂಥವರಿಗೆ ಕ್ಷಮೆ ಇಲ್ಲ ಎಂದು ಎಚ್ಚರಿಕೆ ನೀಡಿದರು.