ನವದೆಹಲಿ,ಮೇ 11(Daijiworld News/MSP): ಯುಎಇ ಕೊರೋನಾ ವೈರಸ್ ನಿಂದ ತತ್ತರಿಸಿದ್ದು ನೆರೆ ರಾಷ್ಟ್ರಕ್ಕೆ ಸಹಾಯವಾಗುವ ಉದ್ದೇಶದಿಂದ ಭಾರತದ 88 ನರ್ಸ್'ಗಳ ತಂಡವನ್ನು ದುಬೈಗೆ ರವಾನಿಸಿದೆ.
ಯುಎಇಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 17,417 ಗಡಿ ದಾಟಿದೆ. ಕಳೆದ 24 ಗಂಟೆಗಳಲ್ಲಿ ಆ ರಾಷ್ಟ್ರದಲ್ಲಿ 624 ಹೊಸ ಪ್ರಕರಣಗಳು ದಾಖಲಾಗಿವೆ. ಇನ್ನು ಒಟ್ಟು 185 ಮಂದಿ ವೈರಸ್'ಗೆ ಬಲಿಯಾಗಿದ್ದಾರೆ. ಈ ಹಿನ್ನಲೆಯಲ್ಲಿ ಆರೋಗ್ಯ ವೃತ್ತಿಪರರಿಗೆ ಸಹಾಯ ಮಾಡಲು ಭಾರತದಿಂದ 88 ದಾದಿಯರ ಮೊದಲ ಬ್ಯಾಚ್ ಯುಎಇಗೆ ಆಗಮಿಸಿದೆ.
ಕೇರಳ, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ಅಲ್ಲಿಗೆ ತಲುಪಿರುವ ದಾದಿಯರನ್ನು 14 ದಿನಗಳ ಕಾಲ ಕ್ವಾರಂಟೈನ್ ನಲ್ಲಿ ಒಳಪಡಿಸಿ ನಂತರ ಅವರನ್ನು ಅಗತ್ಯಕ್ಕೆ ಅನುಗುಣವಾಗಿ ವಿವಿಧ ಕ್ಷೇತ್ರ ಆಸ್ಪತ್ರೆಗಳಿಗೆ ನಿಯೋಜಿಸಲಾಗುವುದು ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ. ಭಾರತದ ನರ್ಸ್ ಗಳ ತಂಡ ಶನಿವಾರ ವಿಶೇಷ ವಿಮಾನದಲ್ಲಿ ದುಬೈ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾರೆ.
ಇದು ಉಭಯ ದೇಶಗಳ ನಡುವಿನ ಸ್ನೇಹವನ್ನು ಇನ್ನಷ್ಟು ಬಲಪಡಿಸುತ್ತದೆ ಎಂದು ಯುಎಇಯ ಭಾರತದ ರಾಯಭಾರಿ ಪವನ್ ಕಪೂರ್ ಹೇಳಿದ್ದಾರೆ.
ತೀವ್ರ ನಿಗಾ ಘಟಕದಲ್ಲಿ ಕೆಲಸ ಮಾಡುವ ಪರಿಣತಿ ಹೊಂದಿರುವ ಭಾರತೀಯ ದಾದಿಯರು, "ಜನರಿಗೆ ಸೇವೆ ನೀಡುವುದು ನಮ್ಮ ಕರ್ತವ್ಯವಾಗಿದೆ, ಭಾರತದಿಂದ ಈ ವಿಶೇಷ ನಿಯೋಗದ ಭಾಗವಾಗಿ ಯುಎಇಯಲ್ಲಿ ಸಾಂಕ್ರಾಮಿಕ ರೋಗವನ್ನು ಎದುರಿಸಲು ಸಹಾಯ ಮಾಡಲು ನಮ್ಮೆಲ್ಲರಿಗೂ ಹೆಮ್ಮೆ ಅನಿಸುತ್ತದೆ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ ಎಂದು ಖಲೀಜ್ ಟೈಮ್ಸ್ ವರದಿಯಲ್ಲಿ ತಿಳಿಸಿದೆ.