ನವದೆಹಲಿ, ಮೇ 11 (DaijiworldNews/PY) : ಲಾಕ್ಡೌನ್ ಕಾರಣದಿಂದ ಉತ್ತರಪ್ರದೇಶ, ದೆಹಲಿ, ಹರಿಯಾಣ, ರಾಜಸ್ಥಾನ ಹಾಗೂ ಮತ್ತಿತರ ರಾಜ್ಯಗಳಲ್ಲಿ ಸಿಲುಕಿರುವ ಕರ್ನಾಟಕದ ಪ್ರವಾಸಿಗರು, ವಿದ್ಯಾರ್ಥಿಗಳು ಹಾಗೂ ವಲಸೆ ಕಾರ್ಮಿಕರನ್ನು ಶ್ರಮಿಕ ವಿಶೇಷ ರೈಲಿನಲ್ಲಿ ಕರೆದೊಯ್ಯಲು ರಾಜ್ಯ ಸರ್ಕಾರ ತಿರ್ಮಾನಿಸಿದೆ.
ಸಾಂದರ್ಭಿಕ ಚಿತ್ರ
ಈ ರೈಲಿನ ಮೂಲಕ ಈಗಾಗಲೇ ಸೇವಾ ಸಿಂಧು ಸಹಾಯವಾಣಿಯಲ್ಲಿ ನೋಂದಣಿ ಮಾಡಿಸಿರುವವರನ್ನು ಉಚಿತವಾಗಿ ಕರೆದೊಯ್ಯಲು ಕ್ರಮ ತೆಗೆದುಕೊಳ್ಳಲಾಗಿದ್ದು, ರೈಲು ಹೊರಡುವ ಸಮಯ ಹಾಗೂ ದಿನಾಂಕವನ್ನು ಬಳಿಕ ತಿಳಿಸಲಾಗುವುದು ಎಂದಿ ಕರ್ನಾಟಕ ಭವನದ ಮೂಲಗಳು ಹೇಳಿವೆ.
ಒಟ್ಟು ಸುಮಾರು 956 ಜನ ನೋಂದಣಿ ಮಾಡಿಸಿದ್ದು, ಇದರಲ್ಲಿ ಸುಮಾರು 800 ಮಂದಿಗೆ ಅವರವರ ಮೂಲ ಜಿಲ್ಲೆಗಳಲ್ಲಿನ ಜಿಲ್ಲಾಧಿಕಾರಿಗಳಿಂದ ಕರೆಸಿಕೊಳ್ಳಲು ಒಪ್ಪಿಗೆ ಸಿಕ್ಕಿದೆ. ಉಳಿದವರಿಗೆ ಅನ್ಯ ಕಾರಣಗಳಿಂದ ಪ್ರಯಾಣಕ್ಕೆ ಅವಕಾಶ ಸಿಗುವುದು ಬಾಕಿಯಾಗಿದೆ. ಪ್ರಯಾಣಕ್ಕೂ ಮೊದಲು ಎಲ್ಲರನ್ನೂ ದೆಹಲಿ ಸರ್ಕಾರದ ವೈದ್ಯಕೀಯ ಸಿಬ್ಬಂದಿ ಮೂಲಕ ಆರೋಗ್ಯ ತಪಾಸಣೆಗೆ ಒಳಪಡಿಸಿ, ಕೊರೊನಾ ಸೋಂಕಿನಿಂದ ಮುಕ್ತರಾಗಿದ್ದಲ್ಲಿ ಮಾತ್ರವೇ ಕರೆದೊಯ್ಯಲಾಗುತ್ತದೆ.
ಇಲ್ಲಿಂದ ತೆರಳುವ ಪ್ರತಿಯೊಬ್ಬರನ್ನು ಪುನಃ ಬೆಂಗಳೂರಿನಲ್ಲಿ ಕಡ್ಡಾಯಾವಾಗಿ ತಪಾಸಣೆಗೆ ಒಳಪಡಿಸಿ ಅವರವರ ಜಿಲ್ಲಾ ಕೇಂದ್ರಕ್ಕೆ ಕರೆದೊಯ್ದು ಬಳಿಕ ಸರ್ಕಾರ ಏರ್ಪಾಡು ಮಾಡಲಾದ ಸ್ಥಳಗಳಲ್ಲಿ ಕ್ವಾರಂಟೈನ್ ಮಾಡಲಾಗುತ್ತದೆ. 14 ದಿನಗಳ ಬಳಿಕ ಪುನಃ ತಪಾಸಣೆ ಮಾಡಿ ನೆಗೆಟಿವ್ ವರದಿ ಬಂದರೆ ಮಾತ್ರವೇ ಅವರನ್ನು ಮನೆಗೆ ಕಳುಹಿಸಿಕೊಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ದೆಹಲಿ ಸರ್ಕಾರ ವಿಶೇಷ ರೈಲಿಗೆ ಅನುಮತಿ ನೀಡಿದ್ದು, ಕರ್ನಾಟಕ ಸರ್ಕಾರವು ಪ್ರಯಾಣದ ಸಂಪೂರ್ಣ ವೆಚ್ಚವನ್ನಯ ಭರಿಸಲಿದೆ. ಹೆಚ್ಚಿನ ಮಾಹಿತಿಗಳನ್ನು ಮತ್ತೆ ಹಂಚಿಕೊಳ್ಳಲಾಗುತ್ತದೆ ಹಾಗೂ ರೈಲು ಹೊರಡುವ ಸಮಯದ ಬಗ್ಗೆಯೂ ವಿವರಿಸಲಾಗುತ್ತದೆ. ಯಾರೂ ಭಯಪಡುವುದು ಬೇಡ ಎಂದು ನೋಂದಾಯಿತರಿಗೆ ಕರೆ ಮಾಡಿ ಸ್ಪಷ್ಟನೆ ನೀಡಲಾಯಿತು.
ಸೇವಾ ಸಿಂಧು ಸಹಾವಾಣಿಯಡಿ ನೋಂದಣಿ ಮಾಡದೇ ಇರುವ ಸಾರ್ವಜನಿಕರಿಗೆ ಇನ್ನೊಂದು ಹವಾನಿಯಂತ್ರಿತ ಬೋಗಿಗಳ ರೈಲು ಇಲ್ಲಿಂದ ಬೆಂಗಳೂರಿಗೆ ಇದೇ 14ರಂದು ತೆರಳಲಿದೆ.
ಹವಾನಿಯಂತ್ರಿತ ರೈಲಿನಲ್ಲಿ ತೆರಳಲು ಇಚ್ಚಿಸುವವರು ಆನ್ಲೈನ್ನಲ್ಲಿ ಐಆರ್ಸಿಟಿಸಿ ಆ್ಯಪ್ ಮುಖಾಂತರ ಟಿಕೆಟ್ ಕಾಯ್ದಿರಿಸುವುದು ಕಡ್ಡಾಯವಾಗಿದೆ. ಸೋಮವಾರ ಸಂಜೆ 4ರಿಂದ ಈ ರೈಲಿನ ಮೂಲಕ ಪ್ರಯಾಣ ಮಾಡಲು ಬಯಸುವವರಿಗಾಗಿ ಆನ್ಲೈನ್ ಟಿಕೆಟ್ ಬುಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಯಾವುದೇ ಏಜೆನ್ಸಿಗಳಿಗೆ ಟಿಕೆಟ್ ಹಂಚಿಕೆ ಮಾಡಲು ಅನುಮತಿ ನೀಡಿಲ್ಲ ಎಂಬುದಾಗಿ ಪ್ರಕಟಣೆ ತಿಳಿಸಿದೆ.