ನವದೆಹಲಿ, ಮೇ 12 (Daijiworld News/MB) : ಕೊರೊನಾ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ಡೌನ್ ಇನ್ನಷ್ಟು ದಿನ ವಿಸ್ತರಣೆಯಾಗಲಿ ಎಂದು ಕೆಲವು ರಾಜ್ಯಗಳ ಮುಖ್ಯಮಂತ್ರಿಗಳು ಒತ್ತಾಯಿಸಿದ್ದು ಕೊರೊನಾ ವಿರುದ್ಧದ ಹೋರಾಟಕ್ಕಾಗಿ ರಾಜ್ಯಕ್ಕೆ ಹೆಚ್ಚಿನ ಅಧಿಕಾರ ನೀಡಿ ಎಂದು ಮುಖ್ಯಮಂತ್ರಿಗಳು ಪ್ರಧಾನಿ ಮೋದಿ ಬಳಿ ಮನವಿ ಮಾಡಿದ್ದಾರೆ.
ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿಗಳ ಜೊತೆಗೆ ವಿಡಿಯೋ ಸಂವಾದದಲ್ಲಿ ಎಲ್ಲಾ ಮುಖ್ಯಮಂತ್ರಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಯಾವ ಪ್ರದೇಶ ಯಾವ ವಲಯ ಎಂಬುದನ್ನು ನಿರ್ಧರಿಸುವ ಅವಕಾಶ ರಾಜ್ಯಗಳಿಗೆಬೇಕು. ರಾಜ್ಯಗಳಿಗೆ ಕೇಂದ್ರದಿಂದ ಆರ್ಥಿಕ ನೆರವು ಲಭಿಸಬೇಕು ಎಂದು ಇನ್ನೂ ಕೆಲವು ಮುಖ್ಯಮಂತ್ರಿಗಳು ಒತ್ತಾಯಿಸಿದ್ದಾರೆ.
ಇನ್ನು ಮೋದಿ ಅವರು ಸಂವಾದದಲ್ಲಿ ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಸಮತೋಲನದ ಕಾರ್ಯತಂತ್ರ ರೂಪಿಸಿ ಅದನ್ನು ಜಾರಿಗೆ ತರಬೇಕು. ಗ್ರಾಮಗಳಿಗೆ ಕೊರೊನಾ ಹರಡದಂತೆ ನೋಡಿಕೊಳ್ಳುವುದು ದೇಶದ ಅತೀ ದೊಡ್ಡ ಸವಾಲು ಎಂದು ಹೇಳಿದರು.
ಈ ವಿಡಿಯೋ ಸಂವಾದದ ಸಂದರ್ಭದಲ್ಲಿ ಮಾತನಾಡಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಕೊರೊನಾ ವಿರುದ್ಧದ ಹೋರಾಟದ ವಿಚಾರದಲ್ಲಿ ಅನಗತ್ಯವಾಗಿ ಪಶ್ಚಿಮ ಬಂಗಾಳವನ್ನು ಟೀಕೆ ಮಾಡುತ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿ ರಾಜಕೀಯ ತರವಲ್ಲ. ಇದು ಎಲ್ಲರೂ ಒಗ್ಗಟ್ಟಾಗಿ ಹೋರಾಡುವ ಸಮಯ. ಕೊರೊನಾ ನಿಯಂತ್ರಣಕ್ಕೆ ಕೇಂದ್ರ ಸ್ಪಷ್ಟವಾದ ಕಾರ್ಯತಂತ್ರ ರೂಪಿಸಬೇಕು ಎಂದು ಹೇಳಿದ್ದಾರೆ.
ಛತ್ತೀಸಗಡ ಮುಖ್ಯಮಂತ್ರಿ ಭೂಪೇಶ್ ಬಘೆಲ್, ಕೊರೊನಾ ಹರಡುವಿಕೆಗೆ ಅನುಗುಣವಾಗಿ ಗುರುತಿಸಲಾಗುವ ಕೆಂಪು, ಕಿತ್ತಳೆ, ಹಸಿರು ವಲಯಗಳನ್ನು ವಿಂಗಡನೆ ಮಾಡುವ ಅವಕಾಶ ರಾಜ್ಯಕ್ಕೆ ನೀಡಬೇಕು. ಹಾಗೂ ನಮ್ಮ ರಾಜ್ಯಕ್ಕೆ ₹30 ಸಾವಿರ ಕೋಟಿ ನೆರವು ನೀಡಬೇಕು ಎಂದು ಕೇಂದ್ರವನ್ನು ಅವರು ಕೇಳಿಕೊಂಡರು.
ಕಂಟೈನ್ಮೆಂಟ್ ವಲಯ ಬಿಟ್ಟು ದೆಹಲಿಯ ಇತರ ಭಾಗಗಳಲ್ಲಿ ಆರ್ಥಿಕ ಚಟುವಟಿಕೆ ಆರಂಭಿಸಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಹೇಳಿದ್ದಾರೆ.