ಕೋಲಾರ, ಮೇ 12 (Daijiworld News/MB) : ಮೂರನೇ ಲಾಕ್ಡೌನ್ ಸಂದರ್ಭದಲ್ಲಿ ಕೆಲವೊಂದು ಸಡಿಲಿಕೆಯನ್ನು ಮಾಡಿ ಮದ್ಯಮಾರಾಟಕ್ಕೆ ಅವಕಾಶ ನೀಡಲಾಗಿದೆ. ಇದರಿಂದಾಗಿ ಒಂದು ದಿನದಲ್ಲೇ ನಿರೀಕ್ಷೆಗೆ ಮೀರಿ ಸರ್ಕಾರಕ್ಕೆ ಆದಾಯ ಲಭಿಸಿತ್ತು. ಇದೀಗ ಮದ್ಯ ಮಾರಾಟ ಪುನರ್ ಆರಂಭ ಮಾಡಿ ಒಂದು ವಾರವಾಗಿದ್ದು ಒಂದು ವಾರ ನಡೆದ ಮದ್ಯ ಮಾರಾಟದ ವಹಿವಾಟಿನಲ್ಲಿ 1000 ಕೋಟಿ ರೂ ಆದಾಯ ಲಭಿಸಿದೆ ಎಂದು ಅಬಕಾರಿ ಸಚಿವ ಎಚ್ ನಾಗೇಶ್ ಹೇಳಿದ್ದಾರೆ.
ಈ ಕುರಿತಾಗಿ ಸೋಮವಾರ ಕೋಲಾರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸುಮಾರು 3 ಸಾವಿರ ಕೋಟಿ ರೂಪಾಯಿ 42 ದಿನಗಳ ಲಾಕ್ ಡೌನ್ ಅವಧಿಯಲ್ಲಿ ನಷ್ಟವಾಗಿದ್ದು ಪ್ರಸಕ್ತ 22,500 ಕೋಟಿ ರೂ ಆದಾಯ ಗಳಿಸುವ ಗುರಿಯಿದೆ. ಅಬಕಾರಿ ಸುಂಕ ಶೇ. 17 ರಷ್ಟು ಹೆಚ್ಚಳ ಮಾಡಿರುವ ಪರಿಣಾಮ 2500 ಕೋಟಿ ರೂ ಹೆಚ್ಚುವರಿ ಆದಾಯ ಲಭಿಸಲಿದ್ದು ಒಟ್ಟು 25000 ಗುರಿ ಹೊಂದಿದಂತಾಗಿದೆ ಎಂದು ಹೇಳಿದರು.
ಲಾಕ್ಡೌನ್ ಸಡಿಲವಾಗಿದೆ ಎಂದು ಮಾರ್ಗಸೂಚಿ ಪಾಲನೆ ಮಾಡದಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಗಡಿ ಭಾಗದಿಂದ ಮದ್ಯಕ್ಕಾಗಿ ನೆರೆಯ ರಾಜ್ಯದಿಂದ ಜನರು ಬರುವ ಸಾಧ್ಯತೆಯಿರುವುದರಿಂದ ಗಡಿಯಲ್ಲಿ ತಪಾಸಣೆ ಬಿಗಿಮಾಡಲಾಗಿದೆ ಎಂದು ತಿಳಿಸಿದರು.