ಬೆಂಗಳೂರು, ಮೇ 12 (Daijiworld News/MSP): ರಾಜ್ಯದಲ್ಲಿ ಲಾಕ್ ಡೌನ್ ಸಡಿಲಿಕೆ ಹಿನ್ನಲೆಯಲ್ಲಿ ಹೊರರಾಜ್ಯಗಳಿಂದ ರಾಜ್ಯಕ್ಕೆ ಆಗಮಿಸುವವರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು, ಈ ಕಾರಣಕ್ಕಾಗಿ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯಕ್ಕೆ ಆಗಮಿಸುವ ಎಲ್ಲರನ್ನೂ 14 ದಿನಗಳ ಕಾಲ ಕಡ್ಡಾಯವಾಗಿ ಕ್ವಾರಂಟೈನ್ ಮಾಡುವುದಾಗಿ ರಾಜ್ಯ ಸರ್ಕಾರ ಆದೇಶಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೊರೊನಾ ಹರಡವಿಕೆಯ ವೇಗ ತಡೆಯಲು ಹಾಗೂ ಇತರೆ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವ ಪ್ರತಿಯೊಬ್ಬರೂ ಕೂಡಾ ಸಂಬಂಧಪಟ್ಟ ಸಮುದಾಯ ಕೇಂದ್ರಗಳಲ್ಲಿ ಕ್ವಾರಂಟೈನ್ ನಲ್ಲಿರಿಸಲಾಗುವುದು ಎಂದು ಹೇಳಿದೆ.
ರಾಜ್ಯಕ್ಕೆ ಆಗಮಿಸುವ ಯಾರೇ ಆದರೂ ಯಾವುದೇ ಲಕ್ಷಣಗಳಿಲ್ಲದಿದ್ದರೂ, ಎಲ್ಲರಿಗೂ ಕ್ವಾರಂಟೈನ್ ಕಡ್ಡಾಯವಾಗಿದೆ. ಜಿಲ್ಲಾ ಉಪ ಆಯುಕ್ತರು ಆ ಬಗ್ಗೆ ಪರಿಶೀಲನೆ ನಡೆಸಿಸಬೇಕು. ಒಂದು ವೇಳೆ ಸ್ಥಳೀಯವಾಗಿ ಕ್ವಾರಂಟೈನ್ ವ್ಯವಸ್ಥೆಗಳು ಇಲ್ಲದಿದ್ದರೆ, ಅವರನ್ನು 14 ದಿನಗಳ ಕಾಲ ಹೋಮ್ ಕ್ವಾರಂಟೈನ್ ನಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ಇಲಾಖೆ ತಿಳಿಸಿದೆ.