ಬೆಳಗಾವಿ, ಮೇ 12 (Daijiworld News/MB) : ಕೊರೊನಾ ಸೋಂಕು ದೃಢಪಟ್ಟು ಬಳಿಕ ಗುಣಮುಖರಾಗಿದ್ದ ಬೆಳಗಾವಿಯ ವ್ಯಕ್ತಿಯೊಬ್ಬರಿಗೆ (ರೋಗಿ ಸಂಖ್ಯೆ 298) 25 ದಿನಗಳಲ್ಲಿ ಮತ್ತೆ ಸೋಂಕು ದೃಢಪಟ್ಟಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಬೆಳಗಾವಿ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಏಪ್ರಿಲ್ 16ರಂದು ಹೃದಯ ತೊಂದರೆಯಿದ್ದ ರಾಯಭಾಗ ತಾಲ್ಲೂಕಿನ ಕುಡಚಿಯ 50 ವರ್ಷದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಆಗಿದ್ದು ಗುಣಮುಖರಾಗಿ ಇದೇ 5ರಂದು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರು. ಅವರನ್ನು ರಾಯಭಾಗದ ಸರ್ಕಾರಿ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಇರಿಸಲಾಗಿತ್ತು ಎಂದು ಹೇಳಿದ್ದಾರೆ.
ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯು ಕೂಡಾ ಈ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದು, ಮತ್ತೆ ಸೋಂಕು ದೃಢಪಟ್ಟಿರುವುದು ಆಶ್ಚರ್ಯಕ್ಕೆ ಕಾರಣವಾಗಿದದೆ. ಮಂಗಳವಾರವೂ ಮತ್ತೊಮ್ಮೆ ಅವರ ಪರೀಕ್ಷೆ ಮಾಡಲಾಗುತ್ತದೆ ಎಂದಿದ್ದಾರೆ.
ಕೊರಿಯಾ ದೇಶದಲ್ಲಿ 180 ಗುಣಮುಖರಾದ ಕೊರೊನಾ ರೋಗಿಗಳಲ್ಲಿ ಮತ್ತು ಚೀನಾದಲ್ಲೂ ಕೆಲವು ಗುಣಮುಖರಾದವರಲ್ಲಿ ಮತ್ತೆ ಕೊರೊನಾ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.