ನವದೆಹಲಿ, ಮೇ 12 (Daijiworld News/MSP): ಕೊರೊನಾ ವೈರಸ್ ಅವಧಿಯಲ್ಲಿ ಎರಡು ತಿಂಗಳುಗಳ ಸುದೀರ್ಘ ನಿಲುಗಡೆಯ ಬಳಿಕ ಲಾಕ್ಡೌನ್ ನಂತರ ಆರ್ಥಿಕತೆಯನ್ನು ಮತ್ತೆ ಟ್ರ್ಯಾಕ್ಗೆ ತರಲು ಪ್ರಯತ್ನಗಳು ನಿಧಾನವಾಗಿ ಪ್ರಾರಂಭವಾಗಿವೆ. ಇದಕ್ಕಾಗಿ ಸದ್ಯ ದೇಶದಲ್ಲಿ ಆಯ್ದ ಪ್ರಯಾಣಿಕ ರೈಲು ಸೇವೆಗೆ ಚಾಲನೆ ನೀಡಲಾಗಿದೆ. ಮಂಗಳವಾರದಿಂದ ಮೊದಲ ಹಂತದಲ್ಲಿ 15 ವಿಶೇಷ ರೈಲುಗಳು ಸಂಚರಿಸಲಿವೆ.
ಆದರೆ ಟಿಕೆಟ್ ಕಾಯ್ದಿರಿಸಿದ್ದರೆ ಮತ್ತು ಪ್ರಯಾಣಿಸಲು ಸಿದ್ಧರಿದ್ದರೆ ಕೆಲವೊಂದು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಮೊದಲನೆಯದಾಗಿ ಪ್ರಯಾಣಿಕರು 90 ನಿಮಿಷ ಮುಂಚಿತವಾಗಿ ರೈಲು ನಿಲ್ದಾಣ ತಲುಪಬೇಕಿದೆ. ಸ್ಕ್ರೀನಿಂಗ್,ತಪಾಸಣೆ ಮತ್ತಿತರ ಪ್ರಕ್ರಿಯೆಗಳನ್ನು ನಡೆಸುವುದಕ್ಕೆ ಈ ಅವಧಿಯನ್ನು ಬಳಸಿಕೊಳ್ಳಲಾಗುತ್ತದೆ. ಪ್ರಯಾಣದ ವೇಳೆ ಮಾಸ್ಕ್ ಕಡ್ಡಾಯ. ಮಾತ್ರವಲ್ಲದೆ ಹೊದಿಕೆ, ಬೆಡ್ ಶೀಟ್, ಆಹಾರ ಪ್ರಯಾಣಿಕರೇ ತರಬೇಕಾಗಿರುತ್ತದೆ.
ದಿಲ್ಲಿಯಿಂದ ಬೆಂಗಳೂರು ಸಹಿತ ದೇಶದ 15 ರಾಜ್ಯ ರಾಜಧಾನಿಗಳಿಗೆ ರೈಲುಗಳು ಸಂಚರಿಸಲಿದ್ದು, ವೇಳಾಪಟ್ಟಿ, ಪ್ರಯಾಣಿಕ ಮಾರ್ಗಸೂಚಿಗಳನ್ನು ರೈಲ್ವೇ ಇಲಾಖೆ ಬಿಡುಗಡೆ ಮಾಡಿದೆ.ಇನ್ನು ವಿಶೇಷ ರೈಲುಗಳಲ್ಲಿ ಒಂದು ಮಾತ್ರ ಕರಾವಳಿ ಮೂಲಕ ಹಾದು ಹೋಗಲಿದೆ. ಆದರೆ ನಿಲುಗಡೆ ಇರುವುದು ಮಂಗಳೂರಿನಲ್ಲಿ ಮಾತ್ರ. ನವದೆಹಲಿಯಿಂದ ಮೇ 13ರಂದು ಹೊರಡುವ ರೈಲು ಮೇ 15ರಂದು ತಿರುವನಂತಪುರ ತಲುಪಲಿದೆ. ಇದು ನವದೆಹಲಿಯಿಂದ ಮಂಗಳವಾರ, ಬುಧವಾರ ಮತ್ತು ಭಾನುವಾರ ಸಂಚರಿಸಲಿದೆ. ಈ ರೈಲಿಗೆ ಮಂಗಳೂರಿನಲ್ಲಿ ಮಾತ್ರ ನಿಲ್ಲಲಿದ್ದು ಉಳಿದಂತೆ ಉಡುಪಿ, ಕಾರವಾರಗಳಲ್ಲಿ ನಿಲ್ಲುವುದಿಲ್ಲ.